Home News ದರೋಡೆ ಪ್ರಕರಣದ ಸ್ಥಳ ಮಹಜರು: ಕಾಲ್ಕೀಳಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು

ದರೋಡೆ ಪ್ರಕರಣದ ಸ್ಥಳ ಮಹಜರು: ಕಾಲ್ಕೀಳಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು

ದಾವಣಗೆರೆ: ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರುಗೆ ಕರೆದೊಯ್ದಿದ್ದ ಆರೋಪಿ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಗುಂಡು ಹಾರಿಸಿದ ಘಟನೆ ತಾಲೂಕಿನ ತೋಳಹುಣಿಸೆ ಬಳಿ ಬುಧವಾರ ರಾತ್ರಿ ನಡೆದಿದೆ.
ತುಮಕೂರು ಜಿಲ್ಲೆಯ ಪಿ.ಗೊಲ್ಲರಹಳ್ಳಿಯ ನವೀನ್ (೩೧) ತಪ್ಪಿಸಿಕೊಳ್ಳಲು ಯತ್ನಿಸಿದ ದರೋಡೆ ಪ್ರಕರಣದ ಆರೋಪಿ. ಕಾಲಿಗೆ ಗುಂಡು ತಗುಲಿದ್ದು ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಆರೋಪಿಗೆ ಚಿಕಿತ್ಸೆ ಕೊಡಿಸಲಾಗಿದೆ.
ಘಟನೆ ವಿವರ: ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈಚೆಗೆ ನಡೆದ ದರೋಡೆ ಪ್ರಕರಣದಲ್ಲಿ ಈ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಸಿಪಿಐ ಶಿಲ್ಪಾ ನೇತೃತ್ವದ ತಂಡವು ಆರೋಪಿಯನ್ನು ಬುಧವಾರ ರಾತ್ರಿ ಸ್ಥಳ ಮಹಜರಿಗೆ ತೋಳಹುಣಸೆ ಗ್ರಾಮಕ್ಕೆ ಕರೆದೊಯ್ದಿತ್ತು.
ಸ್ಥಳ ಮಹಜರು ಮಾಡುವ ಸಂದರ್ಭದಲ್ಲಿ ಆರೋಪಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಗಾಳಿಯಲ್ಲಿ ಗುಂಡು ಹಾರಿಸಿದ ಪೊಲೀಸರು, ಶರಣಾಗತಿಗೆ ಸೂಚನೆ ನೀಡಿದ್ದಾರೆ. ಎಷ್ಟು ಬಾರಿ ಸೂಚನೆ ನೀಡಿದರೂ ತಿರಸ್ಕರಿಸಿದ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ ಸಿಪಿಐ ಶಿಲ್ಪಾ ಮತ್ತು ಪೇದೆ ಚಂದ್ರಶೇಖರ್ ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಕೊಲೆ, ಅತ್ಯಾಚಾರ, ಕಳವು, ದರೋಡೆ ಸೇರಿದಂತೆ ಆರೋಪಿ ವಿರುದ್ಧ ೫೧ ಪ್ರಕರಣಗಳು ದಾಖಲಾಗಿವೆ. ಜಾಮೀನಿನ ಮೇಲೆ ಜೈಲಿನಿಂದ ಹೊರಬಂದು ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾರ್ಚ್ ೧೭ರಂದು ನ್ಯಾಮತಿ ಠಾಣೆಯ ಪೊಲೀಸರು ಉತ್ತರಪ್ರದೇಶದ ದರೋಡೆಕೋರ ಮೇಲೆ ಗುಂಡು ಹಾರಿಸಿದ್ದರು. ಕಳೆದ ೧೫ ದಿನಗಳಲ್ಲಿ ಇದು ಎರಡನೇ ಘಟನೆಯಾಗಿದೆ.

Exit mobile version