Home News ಕಷ್ಟ ಅಲ್ಲ, ಕಪ್ಪ ಕೇಳಲು ಬರುತ್ತಿರುವ ಸುರ್ಜೇವಾಲ

ಕಷ್ಟ ಅಲ್ಲ, ಕಪ್ಪ ಕೇಳಲು ಬರುತ್ತಿರುವ ಸುರ್ಜೇವಾಲ

ಉಡುಪಿ: ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸರ್ಜೇವಾಲ ಆಗಾಗ ರಾಜ್ಯಕ್ಕೆ ಆಗಮಿಸುತ್ತಿರುವುದು ಜನರ ಕಷ್ಟ ಕೇಳಲು ಅಲ್ಲ, ಕಪ್ಪ ಕೇಳಲು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್’ನವರು ಕೇಂದ್ರದ ಕಾಂಗ್ರೆಸ್‌ಗೆ ಕಪ್ಪ ಕೊಡಬೇಕು. ಕೊಡದಿದ್ದರೆ ಅವರು ಪದಚ್ಯುತಿಗೊಳ್ಳುತ್ತಾರೆ. ಹಿಂದೆ ಕಪ್ಪ ಕೊಡದ ಕಾರಣಕ್ಕೆ ವೀರೇಂದ್ರ ಪಾಟೀಲ್ ಅವರನ್ನು ಪಕ್ಷದಿಂದ ಪದಚ್ಯುತಿಗೊಳಿಸಲಾಗಿತ್ತು. ಯಾರು ಅಧಿಕಾರದಲ್ಲಿ ಉಳಿಯಬೇಕೋ ಅವರು ಕಪ್ಪ ಕೊಡುವ ಪರಿಪಾಠ ಇಟ್ಟುಕೊಂಡಿದ್ದಾರೆ ಎಂದರು.

ಸುರ್ಜೇವಾಲ ಆಗಾಗ ರಾಜ್ಯಕ್ಕೆ ಬರುತ್ತಿರುತ್ತಾರೆ. ಕಾಂಗ್ರೆಸ್‌ನಲ್ಲಿ ಕಪ್ಪ ಕೊಡುವ ವಾಡಿಕೆ ಇದೆ. ಹಿಂದೆ ಮೊಗಲರ ಆಳ್ವಿಕೆಯಲ್ಲಿ ಕಪ್ಪ ಕೊಡುವ ಪದ್ಧತಿ ಇತ್ತಂತೆ. ಕಾಂಗ್ರೆಸ್ ಆಡಳಿತದಲ್ಲಿಯೂ ಹಾಗೆಯೇ ಇದೆ ಎಂದು ವ್ಯಂಗ್ಯವಾಡಿದರು.

ಸುರ್ಜೇವಾಲ ಅವರಿಗೆ ಜನರ ಕಷ್ಟ ಕೇಳುವ ಅಭ್ಯಾಸ ಇಲ್ಲ ಎಂದರು.

ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ ಮತ್ತು ಗುರುರಾಜ್ ಗಂಟಿಹೊಳೆ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಕುಮಾರ್ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಮತ್ತು ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ, ಗಿರೀಶ್ ಎಮ್. ಅಂಚನ್ ಇದ್ದರು.

Exit mobile version