ಗದಗ: ರಾಜ್ಯದಲ್ಲಿ ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗೂ ಮುಂಚೆಯೇ 2026ರಲ್ಲಿ ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಭವಿಷ್ಯ ನುಡಿದಿದ್ದಾರೆ.
ಇಂದು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಶ್ರೀ ಜಗದ್ಗುರು ತೋಂಟದಾರ್ಯ ಕಲಾ ಭವನದಲ್ಲಿ ಭಾರತೀಯ ಜನತಾ ಪಕ್ಷದ ರೋಣ ವಿಧಾನಸಭಾ ಮತ ಕ್ಷೇತ್ರದ ಡಂಬಳ ಮಂಡಲದ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಪದಗ್ರಹಣ ಹಾಗೂ ನಿಕಟಪೂರ್ವ ಪದಾಧಿಕಾರಿಗಳಿಗೆ ಏರ್ಪಡಿಸಿದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿದರು.
ಡಂಬಲ ಮಂಡಳದ ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳು. ಪಕ್ಷ ನಿಮ್ಮ ಮೇಲೆ ನಂಬಿಕೆ ಇಟ್ಟಿದೆ. ಬೂತ್ ಮಟ್ಟದಲ್ಲಿ ಸಂಘಟಿಸಿ ಕೇಂದ್ರದ ಯೋಜನಡಗಳನ್ನು ಜನರಿಗೆ ತಲುಪಿಸುತ್ತೀರಿ ಎನ್ನುವ ವಿಶ್ವಾಸ ಇದೆ. ರಾಜಕಾರಣ ವೇಗವಾಗಿ ಬದಲಾಗುತ್ತಿದೆ. ಕೇವಲ ಎರಡು ವರ್ಷದಲ್ಲಿ ಕಾಂಗ್ರೆಸ್ ವಿರುದ್ದ ಜನರ ಬಂಡಾಯ ಎದ್ದಿದೆ. ರಾಜ್ಯದ ಜನತೆಗೆ ಈ ಸರ್ಕಾರದ ಮೇಲೆ ಬ್ರಾಂತಿಯಾಗಿದೆ. ನಮ್ಮ ಸರ್ಕಾರ ಇದ್ದಾಗ ರೈತೆರ ಮಕ್ಕಳಿಗೆ ವಿದ್ಯಾನಿಧಿ ಮಾಡಿದ್ದೇವು ಅದನ್ನು ನಿಲ್ಲಿಸಿದರು. ರೈತರಿಗೆ ಡಿಸೆಲ್ ಸಬ್ಸಿಡಿ ನೀಡುತ್ತಿದ್ದೆವು ಅದನ್ನು ನಿಲ್ಲಿಸಿದರು. ರೈತರಿಗೆ ಸಬ್ಸಿಡಿಯಲ್ಲಿ ಪೈಪು, ಪಂಪುಗಳನ್ನು ನೀಡುತ್ತಿದ್ದೇವು. ರೈತರಿಗೆ ಒಳ್ಳೆಯ ಬೀಜ ಗೊಬ್ಬರ ಸಿಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗುತ್ತಿಲ್ಲ. ಆಸ್ಪತ್ರೆಯಲ್ಲಿ ಔಷಧ ಸಿಗುತ್ತಿಲ್ಲ. ರಾಜ್ಯದಲ್ಲಿ ಬಡವರ ವಿರೋಧಿ ಸರ್ಕಾರ ಇದೆ. ಎಲ್ಲದರಲ್ಲೂ ಭ್ರಷ್ಟಾಚಾರ ತುಂಬಿದೆ. ಪ್ರತಿಯೊಂದು ಕಾಗದ ಪಡೆಯಲು, ಮನೆ ಕಟ್ಡಿಸಲು ಭ್ರಷ್ಟಾಚಾರ, ಪಡಿತರ ಚೀಟಿ ಪಡೆಯಲು ಭ್ರಷ್ಟಾಚಾರ ತುಂಬಿದೆ ಎಂದು ವಾಗ್ದಾಳಿ ನಡೆಸಿದರು.
ಬೆಲೆ ಏರಿಕೆ ಬರೆ
ರಾಜ್ಯ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ವಿದ್ಯುತ್ ದರ ಹೆಚ್ಚಳ, ಪೆಟ್ರೊಲ್ ಬೆಲೆ ಹೆಚ್ಚಳ, ಸ್ಟಾಂಪ್ ಡ್ಯೂಟಿ ಹೆಚ್ಚಳ ಮಾಡಿದರು, ಹಾಲಿನ ದರ ಹೆಚ್ಚಳ, ಸುಮಾರು ಅರವತ್ತು ಸಾವಿರ ಕೋಟಿ ಹೆಚ್ಚುವರಿ ತೆರಿಗೆ ಜನರಿಂದ ಪಡೆಯುತ್ತಿದ್ದಾರೆ. ಎರಡು ವರ್ಷದಲ್ಲಿ ಮೂರು ಲಕ್ಷ ಕೋಟಿ ಹೆಚ್ಚು ಸಾಲ ಮಾಡಿದ್ದಾರೆ. ಪ್ರತಿಯೊಬ್ಬರ ತಲೆಯ ಮೇಲೆ ಒಂದು ಲಕ್ಷ ಕೋಟಿ ಸಾಲ ಹೊರಿಸಿದ್ದಾರೆ. ಮುಂದೆ ಬರುವ ಸರ್ಕಾರ ಇವರು ಮಾಡಿರುವ ಸಾಲ ತೀರಿಸಬೇಕು. ರಾಜ್ಯವನ್ನು ದಿವಾಳಿ ಮಾಡಿದ್ದಾರೆ. ಇದರ ವಿರುದ್ದ ನಾವು ಮಂಡಲ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಇನ್ನೊಂದೆಡೆ ನಮ್ಮ ಪ್ರಧಾನಿಗಳು ಎಲ್ಲ ವರ್ಗದವರ ಅಭಿವೃದ್ಧಿ ಮಾಡುತ್ತಿದ್ದಾರೆ. ಸುಮಾರು 27 ಕೋಟಿ ಜನರು ಬಡತನದಿಂದ ಮೇಲೆ ಬಂದಿದ್ದಾರೆ. ಸುಮಾರು 12 ಕೋಟಿ ಮನೆ ಕಟ್ಟಿದ್ದಾರೆ. 60 ಕೋಟಿ ರೈತರ ಖಾತೆಗೆ ನೇರ ಹಣ ಹಾಕುತ್ತಿದ್ದಾರೆ. ರಸ್ತೆ, ಅಭಿವೃದ್ಧಿ, ರೈಲ್ಬೆ ಅಭಿವೃದ್ಧಿಯಾಗಿದೆ. ಇಡೀ ಜಗತ್ತೇ ಮೆಚ್ಚುವಂತ ನೇತೃತ್ವ ನರೇಂದ್ರ ಮೋದಿಯವರದ್ದಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಬೆಂಗಳೂರು, ಹೈದರಾಬಾದ್, ಮುಂಬೈನಲ್ಲಿ ಬಾಂಬ್ ಹಾಕಿದ್ದರು. ಈಗ ಕಾಶ್ಮೀರದಲ್ಲಿ ಬಾಂಬ್ ಹಾಕಿದ್ದಕ್ಕೆ ಪಾಕಿಸ್ತಾನಕ್ಕೆ ಹೋಗಿ ಹೊಡೆದು ಬಂದಿದ್ದಾರೆ. ನಮ್ಮ ದೇಶದಲ್ಲಿ ಗಟ್ಟಿಯಾದ ನಾಯಕತ್ವ ಇದೆ ಎಂದು ಹೇಳಿದರು.
ನಾನು ನೀರಾವರಿ ಸಚಿವನಾಗಿದ್ದಾಗ ಏಳು ಲಕ್ಷ ಹೆಕ್ಟೇರ ಪ್ರದೇಶ ನೀರಾವರಿ ಮಾಡಿದ್ದೇವೆ. ಇವರು ಹತ್ತು ಸಾವಿರ ಎಕರಎ ನೀರಾವರಿ ಮಾಡಿಲ್ಲ. ನಾವು ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮೀ ಯೋಜನೆ ಕೊಟ್ಟೆವು, ಸೈಕಲ್ ಕೊಟ್ಟಿದ್ದೇವೆ. ರಾಜ್ಯದಲ್ಲಿ ಜನಪರ ಸರ್ಕಾರ ಬರಬೇಕೆಂದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಬರಬೇಕು. ಇಂತಹ ದುಷ್ಟ ಕೆಟ್ಟ ಸರ್ಕಾರ ನಾನು ನೋಡಿರಲಿಲ್ಲ.
ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದವರಿಗೆ ಮೋಸ ಮಾಡಿದ್ದಾರೆ. ಜಾತಿ ಗಣತಿ ಮಾಡಿ ಅದನ್ನು ಜಾರಿ ಮಾಡದೇ ಈಗ ಮತ್ತೆ ಜಾತಿ ಗಣತಿ ಮಾಡುತ್ತಿದ್ದಾರೆ. ಎಸ್ಸಿ ಎಸ್ಸಿ ನಿಗಮದಲ್ಲಿ ಭ್ರಷ್ಟಾಚಾರ, ದೀನದಲಿತರ ವಿರೋಧಿ ,ರೈತರ ವಿರೋಧಿ ಸರ್ಕಾರ ಇದೆಲ್ಲವನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗೂ ಮುಂಚೆ 2026ರಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯಲಿದೆ. ಮತ್ತೊಮ್ಮೆ ಕಳಕಪ್ಪ ಬಂಡಿಯವರನ್ನು ಆಯ್ಕೆ ಮಾಡಬೇಕು. ಅದಕ್ಕಾಗಿ ಸಂಕಲ್ಪ ಮಾಡಿ ಪಣ ತೊಡೋಣ ಒಗ್ಗಟ್ಟಿನಲ್ಲಿ ಬಲ ಇದೆ. ಭವಿಷ್ಯದ ದಿನಗಳು ಬಿಜೆಪಿ ದಿನಗಳು ಮತ್ತೆ ರಾಜ್ಯದಲ್ಲಿ ಬರುತ್ತವೆ ಎಂದು ಹೇಳಿದರು.