ಕಲಬುರ್ಗಿಯಲ್ಲಿರುವ ಜಯದೇವ ಹೃದ್ರೋಗ ಚಿಕಿತ್ಸಾ ಆಸ್ಪತ್ರೆಗೆ ಸರ್ಕಾರ ಹೊಸ ಕಟ್ಟಡ ನಿರ್ಮಿಸಿ ಉತ್ತಮ ಕೆಲಸ ಮಾಡಿದೆ. ಕಲ್ಯಾಣ ಕರ್ನಾಟಕದ ರೋಗಿಗಳಿಗೆ ಇದೊಂದು ವರದಾನ. ಹಿಂದೆ ಹೃದ್ರೋಗಿಗಳು ಹೈದರಾಬಾದ್ ಅಥವಾ ಬೆಂಗಳೂರಿಗೆ ಹೋಗಬೇಕಿತ್ತು. ಅದರಲ್ಲೂ ಬಡವರಿಗೆ ದೂರದ ನಗರಗಳಿಗೆ ಹೋಗುವುದು ಭರಿಸಲಾಗದ ವೆಚ್ಚವಾಗುತ್ತಿತ್ತು. ೨೦೧೬ರಲ್ಲಿ ಜಯದೇವ ಆಸ್ಪತ್ರೆ ಆರಂಭಗೊಂಡಿತು. ಆಗ ೧೩೦ ಹಾಸಿಗೆ ಮಾತ್ರ ಇತ್ತು. ೬ ಲಕ್ಷ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ೧೩೦೦ ತೆರೆದ ಹೃದ್ರೋಗ ಚಿಕಿತ್ಸೆಗಳು ನಡೆಯುತ್ತಿದ್ದವು. ಈಗ ಹೊಸ ಕಟ್ಟಡ ನಿರ್ಮಾಣಗೊಂಡ ಮೇಲೆ ಹಾಸಿಗೆಗಳ ಸಂಖ್ಯೆ ೩೭೧ಕ್ಕೆ ಏರಿದೆ. ಪ್ರತಿವರ್ಷ ೧೧ ಲಕ್ಷ ಜನ ಚಿಕಿತ್ಸೆ ಪಡೆಯಬಹುದು. ೧೦೫ ಐಸಿಸಿಯು ಹಾಸಿಗೆಗಳಿವೆ. ಇದರಿಂದ ಬಡವರಿಗೆ ಅನುಕೂಲವಾಗಲಿದೆ. ಜಯದೇವ ಆಸ್ಪತ್ರೆ ಸರ್ಕಾರಿ ಸಂಸ್ಥೆಯಾದರೂ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಸರಿಸಮಾನವಾಗಿ ಕೆಲಸ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಇದಕ್ಕೆ ಡಾ. ಮಂಜುನಾಥ್ ಅವರ ಪರಿಶ್ರಮ ಉಲ್ಲೇಖಾರ್ಹ.
ಏಕೀಕರಣಕ್ಕೆ ಮುನ್ನ ಈ ಭಾಗದಲ್ಲಿ ಆರೋಗ್ಯ ವ್ಯವಸ್ಥೆ ಉತ್ತಮವಾಗಿರಲಿಲ್ಲ. ಎಲ್ಲದ್ದಕ್ಕೂ ಜನ ಸೊಲ್ಲಾಪುರ ಮತ್ತು ಹೈದರಾಬಾದ್‌ಗೆ ಹೋಗುವುದು ಅನಿವಾರ್ಯವಾಗಿತ್ತು. ಮಲ್ಲಿಕಾರ್ಜುನ ಖರ್ಗೆ ಅವರು ಈ ಭಾಗದ ಪ್ರಮುಖ ನಾಯಕರಾಗಿ ಹೊರಹೊಮ್ಮಿದ ಮೇಲೆ ಹಲವು ಕ್ರಾಂತಿಕಾರಿ ಬದಲಾವಣೆಗಳು ಬಂದಿದೆ. ಸಂವಿಧಾನದ ವಿಧಿ ೩೭೧ ಜೆ ರೀತ್ಯ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಲಭಿಸಿದ ಮೇಲೆ ಈ ಭಾಗದ ಬೆಳವಣಿಗೆಗೆ ಹೆಚ್ಚು ವೇಗ ಸಿಕ್ಕಿದೆ. ಹೀಗಾಗಿ ರೋಗಿಗಳು ನೆರೆ ರಾಜ್ಯಗಳಿಗೆ ಹೋಗುವುದು ಇಳಿಮುಖಗೊಂಡಿದೆ. ಇದೇರೀತಿ ಮಾನಸಿಕ ರೋಗಿಗಳಿಗೆ `ನಿಮ್ಹಾನ್ಸ್’ ಸಂಸ್ಥೆಯ ಮತ್ತೊಂದು ಶಾಖೆ ಆರಂಭಗೊಳ್ಳಬೇಕಿದೆ. ರಾಜ್ಯ ಸರ್ಕಾರ ಮೂಲಭೂತ ಸವಲತ್ತು ಕಲ್ಪಿಸಿದರೆ ಕೇಂದ್ರ ಸರ್ಕಾರ ಉಳಿದ ನೆರವು ಒದಗಿಸಲಿದೆ. ಈ ದಿಸೆಯಲ್ಲಿ ಕೆಲಸ ನಡೆಯಬೇಕಿದೆ. ಕಲ್ಯಾಣ ಕರ್ನಾಟಕ ವಿಧಾನಸೌಧದಿಂದ ೬೦೦ ಕಿ.ಮೀ. ದೂರದಲ್ಲಿದ್ದರೂ ಸರ್ಕಾರ ಕಲ್ಪಿಸಿಕೊಡುವ ಮೂಲಭೂತ ಸವಲತ್ತುಗಳಿಂದ ಅಲ್ಲಿಯ ಜನರಿಗೆ ಸರ್ಕಾರ ಸಮೀಪದಲ್ಲೇ ಇದೆ ಎಂಬ ಭಾವನೆ ಮೂಡುವುದರಲ್ಲಿ ಸಂದೇಹವಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಸಚಿವರಾಗಿದ್ದಾಗ ಕಲ್ಯಾಣ ಕರ್ನಾಟಕಕ್ಕೆ ರೈಲ್ವೆ ಸವಲತ್ತು ಹೆಚ್ಚಿಸಿದರು. ಅದರಿಂದ ಜನಸಾಮಾನ್ಯರಿಗೆ ಬೆಂಗಳೂರಿಗೆ ಬಂದು ಹೋಗುವುದು ಸುಲಭವಾಗಿದೆ. ಹೈಕೋರ್ಟ್ ಪೀಠ ಸ್ಥಾಪನೆಯಾದ ಮೇಲೆ ಅಲ್ಲಿಯ ಜನ ಬೆಂಗಳೂರಿಗೆ ಬಂದು ಹೋಗುವುದು ತಪ್ಪಿದೆ. ಕಲಬುರ್ಗಿಯಲ್ಲಿ ಈಗ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆ ತೀವ್ರಗತಿಯಲ್ಲಿ ಸಾಗಿರುವುದರಿಂದ ಹೃದ್ರೋಗ ಚಿಕಿತ್ಸೆಗೂ ಪ್ರತ್ಯೇಕ ವ್ಯವಸ್ಥೆ ಇರುವುದು ಜನರ ಮೇಲೆ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದೆ. ಈ ಕೆಲಸ ಎಂದೋ ನಡೆಯಬೇಕಿತ್ತು. ಹಲವು ದಶಕಗಳಿಂದ ಆ ಭಾಗದ ಜನ ಜಯದೇವ ಆಸ್ಪತ್ರೆಗಾಗಿ ಬೇಡಿಕೆಯನ್ನಿಟ್ಟಿದ್ದರು. ಈಗ ಅದು ಸಂಪೂರ್ಣವಾಗಿ ಸಾಕಾರಗೊಂಡಿರುವುದು ಸಮಗ್ರ ಬೆಳವಣಿಗೆಗೆ ಒತ್ತಾಸೆ ನೀಡಿದಂತಾಗಿದೆ. ಶಿಕ್ಷಣ ಮತ್ತು ಆರೋಗ್ಯ ಇಡೀ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಅಗತ್ಯ. ಈ ದೃಷ್ಟಿಯಿಂದ ರಾಜ್ಯ ಸರ್ಕಾರದ ಸಕಾರಾತ್ಮಕ ನಿಲುವು ಸ್ವಾಗತಾರ್ಹ. ಇದರೊಂದಿಗೆ ಕೃಷಿ ಮತ್ತು ಕೈಗಾರಿಕೆ ಬೆಳವಣಿಗೆಗೆ ಉತ್ತೇಜನ ನೀಡುವುದು ಅಗತ್ಯ. ಕಲ್ಯಾಣ ಕರ್ನಾಟಕದ ಜನ ಶ್ರಮಜೀವಿಗಳು. ಬಡತನವಿದ್ದರೂ ಕಷ್ಟ ಜೀವಿಗಳು. ಅವರಿಗೆ ಹೃದ್ರೋಗ ಸಮಸ್ಯೆ ತಲೆದೋರಿದರೆ ಅದನ್ನು ಎದುರಿಸುವಷ್ಟು ಆರ್ಥಿಕವಾಗಿ ಸಮರ್ಥರಲ್ಲ. ಅವರಿಗೆ ಜಯದೇವ ಆಸ್ಪತ್ರೆ ಜೀವ ತುಂಬುವ ಕೆಲಸ ಮಾಡುತ್ತಿದೆ. ಸರ್ಕಾರ ನೀಡುವ ಎಲ್ಲ ಸವಲತ್ತುಗಳನ್ನು ಇಲ್ಲಿಯ ಜನ ಬಳಸಿಕೊಂಡು ಜೀವನ ನಡೆಸಬೇಕಾದ ಅನಿವಾರ್ಯತೆ ಇದೆ. ಖಾಸಗಿ ರಂಗದಲ್ಲಿ ಹಲವು ಹೃದ್ರೋಗ ಚಿಕಿತ್ಸಾ ಕೇಂದ್ರಗಳಿದ್ದರೂ ಅಲ್ಲಿಯ ಶುಲ್ಕ ಭರಿಸುವುದು ಇಲ್ಲಿಯ ಜನರಿಗೆ ಕಷ್ಟ. ಕಲಬುರ್ಗಿ, ಬೀದರ್, ರಾಯಚೂರು, ಯಾದಗಿರಿ ಜಿಲ್ಲೆಯಲ್ಲಿ ಬಹುತೇಕ ಜನ ಬಡವರು. ಅವರಿಗೆ ಕೃಷಿಯೊಂದೇ ಆಧಾರ. ಕೈಗಾರಿಕೆಗಳ ಸಂಖ್ಯೆ ಕಡಿಮೆ. ಬೇಸಿಗೆ ಬಂತು ಎಂದರೆ ಬೇರೆ ರಾಜ್ಯಗಳಿಗೆ ಗುಳೇ ಹೋಗುವುದು ಇಲ್ಲಿಯ ಜನರಿಗೆ ಅನಿವಾರ್ಯ. ನಿರುದ್ಯೋಗ ಅಧಿಕ. ಸರ್ಕಾರವೇ ಹೆಚ್ಚು ಜನರಿಗೆ ಉದ್ಯೋಗ ನೀಡಬೇಕು. ಇಂಥ ಪರಿಸ್ಥಿತಿಯಲ್ಲಿ ಜಯದೇವ ಆಸ್ಪತ್ರೆಯ ಸೇವೆ ನಿಜಕ್ಕೂ ಸ್ಮರಣೀಯ. ಇಲ್ಲಿಯ ಜನಪ್ರತಿನಿಧಿಗಳು ಸರ್ಕಾರದಿಂದ ಅನುದಾನ ತರುವುದರಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ. ಕೇಂದ್ರ ಮತ್ತು ರಾಜ್ಯದ ನೆರವು ಸಕಾಲಕ್ಕೆ ಬಂದಲ್ಲಿ ಇಲ್ಲಿಯ ಜನರ ಆರ್ಥಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆ ನಿರೀಕ್ಷಿತ ಮಟ್ಟದಲ್ಲಿರುವುದು ನಿಶ್ಚಿತ. ಇಲ್ಲಿಯ ನಾಯಕರು ಜನಪರ ನಿಲುವು ತೋರಿದ್ದಲ್ಲಿ ಜನರ ಸಹಕಾರ ದೊರಕುವುದರಲ್ಲಿ ಸಂದೇಹವಿಲ್ಲ. ಈ ದಿಕ್ಕಿನಲ್ಲಿ ಜಯದೇವ ಆಸ್ಪತ್ರೆ ಬೆಳವಣಿಗೆ ಅಭಿವೃದ್ಧಿಯ ಪಥದಲ್ಲಿ ಗಮನಾರ್ಹ ಹೆಜ್ಜೆ.