ಹಾಡಿಗೆ ಹೆಜ್ಜೆ ಹಾಕಿದ ಯುವ, ಸಂಜನಾ
ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತ ಸಾವು ನೋವುಗಳಿಂದ ಮುಂದೂಡಲಾಗಿದ್ದ ನಟ ಯುವ ರಾಜ್‌ಕುಮಾರ್ ಅಭಿನಯದ ‘ಎಕ್ಕ’ ಸಿನಿಮಾದ ‘ಬ್ಯಾಂಗಲ್ ಬಂಗಾರಿ’ ಎಂಬ ಹಾಡು ಇಂದು ಬಿಡುಗಡೆಯಾಗಿದೆ.
ನಟ ಯುವ ರಾಜ್‌ಕುಮಾರ್ ಅವರ ಎರಡನೇ ಸಿನಿಮಾ ‘ಎಕ್ಕ’ದ ‘ಬ್ಯಾಂಗಲ್ ಬಂಗಾರಿ’ ಹಾಡಿಗೆ ಚರಣ್ ರಾಜ್ ಸಂಗೀತ ನೀಡಿದ್ದು, ನಾಗಾರ್ಜುನ್ ಶರ್ಮಾ ಸಾಹಿತ್ಯಕ್ಕೆ ಅಂತೋನಿ ದಾಸನ್ ಅವರ ಕಂಠಸಿರಿಯಿದೆ, ಮುರಳಿ ಮಾಸ್ಟರ್ ಅವರ ನೃತ್ಯ ಸಂಯೋಜನೆಗೆ ಬ್ಯಾಂಗಲ್ ಬಂಗಾರಿಯಾಗಿ ನಟಿ ಸಂಜನಾ ಆನಂದ್ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಅಂದುಕೊಂಡತೆ ಆದರೆ ನಿರ್ಮಾಪಕರಾದ PRK, KRG ಮತ್ತು ಜಯಣ್ಣ ಫಿಲ್ಮ್ ಅವರ ‘ಎಕ್ಕ’ ಸಿನಿಮಾ ಜುಲೈ 18ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.
ರೋಹಿತ್ ಪದಕಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಂಪದ ಚಿತ್ರದ ಮತ್ತೊಬ್ಬ ನಾಯಕಿ. ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯ ಸೇರಿದಂತೆ ಸಾಕಷ್ಟು ಕಲಾವಿದರು ತಾರಾಗಣದಲ್ಲಿದ್ದಾರೆ.