Home ಕ್ರೀಡೆ ಕೆ.ಎಲ್. ರಾಹುಲ್ ಔಟ್: ಅಂತಾರಾಷ್ಟ್ರೀಯ ಗಮನ ಸೆಳೆದ ಹು-ಧಾ ಪೊಲೀಸ್ ಆಯುಕ್ತರ ಟ್ವೀಟ್…!

ಕೆ.ಎಲ್. ರಾಹುಲ್ ಔಟ್: ಅಂತಾರಾಷ್ಟ್ರೀಯ ಗಮನ ಸೆಳೆದ ಹು-ಧಾ ಪೊಲೀಸ್ ಆಯುಕ್ತರ ಟ್ವೀಟ್…!

0

ಹುಬ್ಬಳ್ಳಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟರ್ ಕೆ.ಎಲ್. ರಾಹುಲ್ ಅವರ ಔಟ್ ತೀರ್ಪು ವಿವಾದಕ್ಕೆ ಕಾರಣವಾಗಿದೆ. ಸಂಚಾರ ಜಾಗೃತಿ ಮೂಡಿಸಲು ಈ ಚಿತ್ರವನ್ನು ಬಳಸಿಕೊಂಡು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಪೋಸ್ಟ್ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ೨೩ನೇ ಓವರ್‌ನಲ್ಲಿ ಕೆ.ಎಲ್. ರಾಹುಲ್ ಅವರು ೨೬ ರನ್ ಗಳಿಸಿ ಆಡುತ್ತಿದ್ದಾಗ ಮೂರನೇ ಅಂಪೈರ್ ನೀಡಿದ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ಮಿಚೆಲ್ ಸ್ಟಾರ್ಕ್ ಎಸೆತವನ್ನು ಡಿಫೆಂಡ್ ಮಾಡಲು ಯತ್ನಿಸಿದಾಗ ಬ್ಯಾಟ್‌ಗೆ ಟಚ್ ಆಗಿದೆ ಎನ್ನುವಷ್ಟು ಸನಿಹದಿಂದ ಸಾಗಿದ ಬಾಲ್ ಕೀಪರ್ ಕೈ ಸೇರಿತು. ಈ ವೇಳೆ ಕೀಪರ್ ಮಾಡಿದ ಮನವಿಯನ್ನು ಆನ್‌ಫೀಲ್ಡ್ ಅಂಪೈರ್ ತಿರಸ್ಕರಿಸಿದರು. ಹೀಗಾಗಿ ಆಸ್ಟ್ರೇಲಿಯಾ ತಂಡ ಮೇಲ್ಮನವಿ ಸಲ್ಲಿಸಿತು.
ಪರಿಶೀಲನೆ ವೇಳೆ ಸ್ವೀಕೊ ಮೀಟರ್‌ನಲ್ಲಿ ಏರಿಳಿತ ಕಂಡು ಬಂದಿತ್ತು. ಆದರೆ ಮತ್ತೊಂದು ಕೋನದಲ್ಲಿ ಚೆಂಡು ಬ್ಯಾಟಿಗೆ ತಾಗದಿರುವುದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಶಬ್ದ ಬ್ಯಾಟ್‌ನದ್ದೋ, ಪ್ಯಾಡ್‌ನದ್ದೋ ಎಂದು ನಿರ್ಣಯಕ್ಕೆ ಬರಲಾಗದೆ ಕೊನೆಗೆ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಥರ್ಡ್ ಅಂಪೈರ್‌ನ ಈ ವಿವಾದಾತ್ಮಕ ತೀರ್ಪು ಪೊಲೀಸ್ ಆಯುಕ್ತರಿಗೆ ಸಂಚಾರ ಜಾಗೃತಿ ಮೂಡಿಸಲು ಸ್ಫೂರ್ತಿ ನೀಡಿತು. ಈ ಚಿತ್ರ ಬಳಸಿಕೊಂಡು ಇಫ್ ಯು ಡೋಂಟ್ ಸೀ ದ್ ಗ್ಯಾಪ್ ಬಿಟ್ವೀನ್ ದ್ ಬ್ಯಾಟ್ ಅಂಡ್ ಬಾಲ್…! ದೆನ್ ಪ್ಲೀಸ್ ಡೋಂಟ್ ಡ್ರೈವ್ ಆನ್ ರೋಡ್ ಟುನೈಟ್ ಎಂಬ ಬರಹದೊಂದಿಗೆ ಟ್ವೀಟ್ ಮಾಡಿದರು. ಬ್ಯಾಟ್ ಮತ್ತು ಬಾಲ್ ನಡುವಿನ ಅಂತರವನ್ನು ಗಮನಿಸಲು ಸಾಧ್ಯವಾಗದಿದ್ದರೆ…. ರಾತ್ರಿ ವೇಳೆ ರಸ್ತೆಯಲ್ಲಿ ಸಂಚರಿಸಬೇಡಿ ಎಂಬುದು ಪೊಲೀಸ್ ಪೋಸ್ಟ್. ಅಂದರೆ ಮದ್ಯ ಸೇವಿಸಿದವರು, ಇರುಳುಗುರುಡು ಸಮಸ್ಯೆ ಇದ್ದವರು ರಾತ್ರಿ ವೇಳೆ ಗಾಡಿ ಹೊಡೆದರೆ ಆಗುವ ಅನಾಹುತದ ಬಗ್ಗೆ ಕ್ರಿಕೆಟ್ ಚಿತ್ರ ಬಳಸಿ ಜಾಗೃತಿ ಮೂಡಿಸಲಾಗಿದೆ. ಈ ವೈರಲ್ ಚಿತ್ರ ಎಲ್ಲರ ಗಮನ ಸೆಳೆದಿದೆ.

Exit mobile version