Home ತಾಜಾ ಸುದ್ದಿ ಎಸ್ಸಿ, ಎಸ್ಟಿ ಬಾಳಿಗೆ ಹೊಸ ಮೀಸಲು ಬೆಳಗು

ಎಸ್ಸಿ, ಎಸ್ಟಿ ಬಾಳಿಗೆ ಹೊಸ ಮೀಸಲು ಬೆಳಗು

0
ಎಸ್ಸಿ, ಎಸ್ಟಿ ಬಾಳಿಗೆ ಹೊಸ ಮೀಸಲು ಬೆಳಗು

ಬೆಂಗಳೂರು: ಕರ್ನಾಟಕದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸುವ ಬಗ್ಗೆ ನ್ಯಾಯಮೂರ್ತಿ ನಾಗಮೋಹನದಾಸ ಅವರ ಶಿಫಾರಸನ್ನು ಒಪ್ಪಿ ಆಧ್ಯಾದೇಶವನ್ನು ಮಾಡಲು ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡಿರುವುದು ಗೊತ್ತಿದೆ. ಇದಕ್ಕೆ ಇಂದು ರಾಜ್ಯಪಾಲರು ಒಪ್ಪಿಗೆ ಸೂಚಿಸಿರುವುದು ಸಂತಸದ ಸಂಗತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿಳಿಸಿದ್ದಾರೆ.
ಈ ಕುರಿತು ಇಂದು ಅಧಿಕೃತವಾದ ವಿಶೇಷ ರಾಜ್ಯಪತ್ರವನ್ನು ಪ್ರಕಟಿಸಲಾಗಿದೆ. ಇದರಿಂದ ಇನ್ನು ಮುಂದೆ ಅನುಸೂಚಿತ ಜಾತಿಯ ಮೀಸಲಾತಿ ಪ್ರಮಾಣ 15 ರಿಂದ 17ಕ್ಕೆ ಏರಲಿದ್ದು, ಅನುಸೂಚಿತ ಪಂಗಡಗಳ ಮೀಸಲಾತಿ ಪ್ರಮಾಣ ಶೇ. 3 ರಿಂದ 7ಕ್ಕೆ ಏರಿಸಲಾಗಿದೆ.
ನಮ್ಮ ಸರ್ಕಾರವು ಮೀಸಲಾತಿ ಪ್ರಮಾಣ ಹೆಚ್ಚಿಸಿ ಬದ್ಧತೆಯಿಂದ ನಡೆದುಕೊಂಡಿದೆ. ಈ ಮೂಲಕ ಅನುಸೂಚಿತ ಜಾತಿ ಮತ್ತು ಪಂಗಡಗಳ ಜನಾಂಗಕ್ಕೆ ನಮ್ಮ ಸರ್ಕಾರ ದೀಪಾವಳಿ ಕೊಡುಗೆ ಕೊಟ್ಟಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಸುಗ್ರೀವಾಜ್ಞೆಗೆ ಅಂಕಿತ ಹಾಕಿರುವ ಘನವೆತ್ತ ರಾಜ್ಯಪಾಲರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಈ ಆಧ್ಯಾದೇಶಕ್ಕೆ ವಿಧಾನ ಮಂಡಲದ ಎರಡೂ ಸದನದಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿಳಿಸಿದ್ದಾರೆ.