ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ಹುಲಿ ಹತ್ಯೆ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿತ್ತು. ಅರಣ್ಯ ಸಚಿವರ ಆದೇಶದಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ಕೈಗೊಳ್ಳಲಾಗಿತ್ತು. ಈಗ ಈ ಹತ್ಯೆ ಪ್ರಕರಣದ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮ ಪಚ್ಚೆದೊಡ್ಡಿ ಸಮೀಪ 12 ವರ್ಷ ಪ್ರಾಯದ ಹುಲಿಯೊಂದನ್ನು ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಪಚ್ಚೆದೊಡ್ಡಿ ಗ್ರಾಮದ ಪಚ್ಚಮಲ್ಲ, ಗಣೇಶ್, ಗೋವಿಂದೇಗೌಡ, ಸಂಪು ಎಂಬವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಭಾನುವಾರ ಮಧ್ಯಾಹ್ನ ನಾಲ್ವರು ಆರೋಪಿಗಳಿಗೆ ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ನಡೆಸಲಾಯಿತು.
ಪ್ರತೀಕಾರದಿಂದ ಹತ್ಯೆ; ಜಾನುವಾರುಗಳ ಮೇಲೆ ಹುಲಿ ದಾಳಿ ಮಾಡುತ್ತಿದ್ದರಿಂದ ರೊಚ್ಚಿಗೆದ್ದ ದನಗಾಹಿಗಳು ಬೇಟೆಯಾಡಿದ್ದ ಹಸುವಿಗೆ ವಿಷ ಪ್ರಾಷನ ಮಾಡಿಸುವ ಮೂಲಕ ಮತ್ತು ಅದೇ ಹಸುವನ್ನು ತಿಂದು ಹುಲಿ ಸಾಯುವಂತೆ ಮಾಡಿದ್ದರು. ಬಳಿಕ ಅದರ ಕಳೇಬರವನ್ನು ಮೂರು ಭಾಗಗಳಾಗಿ ಕತ್ತರಿಸಿ ಬಿಸಾಡಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹುಲಿ ಬೇಟೆಯಾಡಿದ್ದ ಹಸುವಿನ ಕಳೇಬರಕ್ಕಾಗಿ ಅರಣ್ಯ ಇಲಾಖೆ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದು, ಸುತ್ತಮುತ್ತಲ ಗ್ರಾಮಗಳ ದನಗಾಹಿಗಳ ವಿಚಾರಣೆ ಮಾಡಲಾಗುತ್ತಿದ್ದು, ಸದ್ಯ, ನಾಲ್ವರು ಆರೋಪಿಗಳಿಗೂ ಮೆಡಿಕಲ್ ಟೆಸ್ಟ್ ಮಾಡಿಸಿ ಅರಣ್ಯಾಧಿಕಾರಿಗಳು ಕರೆದೊಯ್ದಿದ್ದಾರೆ.
ಎನ್ಟಿಸಿಎ ನಿಯಮಾನುಸಾರ ಬಂಡೀಪುರದ ಪಶು ವೈದ್ಯ ಡಾ. ವಾಸಿಂ ಮಿರ್ಜಾ, ಹನೂರಿನ ಪಶು ವೈದ್ಯಾಧಿಕಾರಿ ಸಿದ್ದರಾಜು, ಎನ್ ಜಿಒ ಸದಸ್ಯರ ಸಮಕ್ಷಮ ಮರಣೋತ್ತರ ಪರೀಕ್ಷೆ ನಡೆಸಿ ಹುಲಿಯ ಅಂಗಾಂಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹುಲಿ ಹತ್ಯೆ ಸತ್ಯಾಂಶ ವಿಚಾರಣೆ ಬಳಿಕ ತಿಳಿಯಲಿದ್ದು, ಈ ಬಗ್ಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ಮಲೆ ಮಹದೇಶ್ವರ ವನ್ಯಜೀವಿಧಾಮ ಡಿಸಿಎಫ್ ಭಾಸ್ಕರ್ ಮಾಹಿತಿ ನೀಡಿದ್ದಾರೆ.
ತನಿಖೆಗೆ ಸೂಚನೆ: ಮಲೆ ಮಹದೇಶ್ವರದಲ್ಲಿ ಹುಲಿ ಹತ್ಯೆ ಪ್ರಕರಣದ ಬಗ್ಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದರು, ಅಲ್ಲದೇ ತನಿಖೆಗೆ ಆದೇಶಿಸಿದ್ದರು. ವನ್ಯಜೀವಿ ಸಪ್ತಾಹದ ಆರಂಭದ ದಿನವೇ ಮಲೆ ಮಹದೇಶ್ವರ ಬೆಟ್ಟದ ಹನೂರು ವಲಯದಲ್ಲಿ ಹುಲಿ ಹತ್ಯೆ ನಡೆದಿತ್ತು.
ಹುಲಿ ಕಳೇಬರ ಪತ್ತೆಯಾಗಿರುವ ಬಗ್ಗೆ ಪಿಸಿಸಿಎಫ್ ಸ್ಮಿತಾ ಬಿಜ್ಜೂರು ನೇತೃತ್ವದಲ್ಲಿ ತಂಡವೊಂದನ್ನು ರಚಿಸಿ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಲು ಆದೇಶಿಸಿದ್ದರು. ಕಾಡಿನಲ್ಲಿ ಕಳೆದ 3 ವರ್ಷದಲ್ಲಿ ದಾಖಲಾಗಿರುವ ಕಳ್ಳಬೇಟೆ ಪ್ರಕರಣಗಳ ಬಗ್ಗೆಯೂ ಗಮನ ಹರಿಸಿ, ಹಿಂದಿನ ತನಿಖಾ ವರದಿಗಳನ್ನೂ ಪರಾಮರ್ಶಿಸಿ ಮುಂದೆ ಈ ಭಾಗದಲ್ಲಿ ಇಂತಹ ಘಟನೆ ಮರುಕಳಿಸದಂತೆ ಕ್ರಮವಹಿಸಲು, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಹಾಗೂ ಕಳ್ಳಬೇಟೆಗಾರರ ವಿರುದ್ಧ ಸೂಕ್ತ ಕ್ರಮದ ಶಿಫಾರಸಿನೊಂದಿಗೆ 8 ದಿನಗಳಲ್ಲಿ ವರದಿ ಸಲ್ಲಿಸಲು ಸೂಚಿಸಿದ್ದರು.