ಸುನೀಲ ಪಾಟೀಲ
ಮಾರಿಯಾ ಮಚಾಡೊ ಅವರ ಶಾಂತಿ ಪ್ರಯತ್ನಗಳಿಗೆ ಅಂತಾರಾಷ್ಟ್ರೀಯ ಮನ್ನಣೆ ದೊರೆತಿದೆ. ವೆನೆಜುವೆಲಾದ ಜನರಲ್ಲಿ ಪ್ರಜಾಪ್ರಭುತ್ವ ಉತ್ತೇಜಿಸುವ ಜೊತೆಗೆ ದಣಿವರಿಯದ ಶಾಂತಿ ಕೆಲಸಕ್ಕಾಗಿ ಅವರಿಗೆ 2025 ರ ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 2018 ರಲ್ಲಿ ಬಿಬಿಸಿಯು ಮಚಾಡೊರನ್ನು 100 ಪ್ರಭಾವಿ ಮಹಿಳೆಯರಲ್ಲಿ ಒಬ್ಬರೆಂದು ಹೆಸರಿಸಿದೆ. 2025 ರಲ್ಲಿ ಟೈಮ್ ನಿಯತಕಾಲಿಕೆ ಜಗತ್ತಿನ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಇವರನ್ನು ಗುರುತಿಸಿದೆ. ಪ್ರಭುತ್ವವಿರಲಿ ಆಥವಾ ನಿರಂಕುಶತೆಯಿರಲಿ.. ಪ್ರಜೆಗಳ ಧ್ವನಿಗೆ ಕೊರಳಾದವರು ಅವರು…
ವೆನೆಜುವೆಲಾ ಎಂಬುದು ಸೌಂದರ್ಯ ಖಣಿಗಳ ನಾಡು. ಬಹಳ ವರ್ಷ ಸೌಂದರ್ಯ ಸ್ಪರ್ಧೆಗಳಲ್ಲಿ ವೆನೆಜುವೆಲಾ ಹೆಣ್ಣುಮಕ್ಕಳ ಪಾರಮ್ಯವಿತ್ತು. ಸುಮಾರು 24 ಬಾರಿ ವೆನೆಜುವೆಲಾ ವನಿತೆಯರು ಮಿಸ್ ವರ್ಲ್ಡ್, ಯುನಿವರ್ಸ್ ಸ್ಪರ್ಧೆಗಳನ್ನು ಗೆದ್ದಿದ್ದಾರೆ. ಈ ಸೌಂದರ್ಯವತಿಯರ ನಾಡಲ್ಲಿ ಅಪ್ಪಟ ಉಕ್ಕಿನ ಮಹಿಳೆ ಮಾರಿಯಾ ಕೊರಿನಾ ಮಚಾಡೊ ಪ್ರಭುತ್ವದ ವಿರುದ್ಧದ ತನ್ನ ಹೋರಾಟಗಳಿಂದ ನೊಬೆಲ್ ಶಾಂತಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಮಾರಿಯಾ ವೆನೆಜುವೆಲಾದ ರಾಜಕಾರಣಿ ಮತ್ತು ಕಾರ್ಯಕರ್ತೆ. ಹ್ಯೂಗೋ ಚಾವೆಜ್ ಮತ್ತು ನಿಕೋಲಸ್ ಮಡುರೊ ಸರ್ಕಾರಗಳು ರಾಷ್ಟçದಲ್ಲಿ ಆಳ್ವಿಕೆ ನಡೆಸುವಾಗ ಪ್ರಮುಖ ವಿರೋಧ ಪಕ್ಷದ ನಾಯಕಿಯಾಗಿದ್ದ ಅವರು 2011 ರಿಂದ 2014 ರವರೆಗೆ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರಾಗಿ ಸೇವೆ ಸಲ್ಲಿಸಿದವರು. ಮಡುರೊ ಆಡಳಿತದಿಂದ ದಬ್ಬಾಳಿಕೆ ಅನುಭವಿಸುತ್ತಿರುವಾಗ ಅಧ್ಯಕ್ಷೀಯ ಚುನಾವಣೆಗಳಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರನ್ನು ಉದಾರವಾದಿ ಸಂಪ್ರದಾಯವಾದಿ ರಾಜಕಾರಣಿ ಎಂದೂ ಪರಿಗಣಿಸಲಾಗುತ್ತಿದೆ.. ಇಂದು ಒಂದು ಸಿಡಿದೆದ್ದ ದೇಶದಲ್ಲಿ ಮತ್ತೊಮ್ಮೆ ಪ್ರಜಾಪ್ರಭುತ್ವದ ಬೇರು ಬಿತ್ತಿದ, ವೈಯಕ್ತಿಕ ಬದುಕನ್ನು ನಿಕಷಕ್ಕೆ ಒಡ್ಡಿ ಅಗ್ನಿಕುಂಡ ದಾಟಿಬಂದ ಮಾರಿಯೋ ನಾಡಿನಾದ್ಯಂತ ಸೌರಭ ಪಸರಿಸುತ್ತಿದ್ದಾಳೆ…
ಹಣಕಾಸಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಕೈಗಾರಿಕಾ ಎಂಜಿನಿಯರ್ ಆಗಿರುವ ಮಚಾಡೊ, ಮತ-ಮೇಲ್ವಿಚಾರಣಾ ಸಂಸ್ಥೆ ಸುಮೇಟ್‌ನ ಸಂಸ್ಥಾಪಕಿಯಾಗಿ ತಮ್ಮ ರಾಜಕೀಯ ವೃತ್ತಿಜೀವನ ಪ್ರಾರಂಭಿಸಿದರು. ಅವರು ವೆಂಟೆ ವೆನೆಜುವೆಲಾ ರಾಜಕೀಯ ಪಕ್ಷದ ರಾಷ್ಟ್ರೀಯ ಸಂಯೋಜಕರೂ ಸಹ. 2012 ರ ವಿರೋಧ ಪಕ್ಷದ ಅಧ್ಯಕ್ಷೀಯ ಪ್ರಾಥಮಿಕ ಚುನಾವಣೆಯಲ್ಲಿ ಸ್ಪರ್ಧಿಸಿ, ಹೆನ್ರಿಕ್ ಕ್ಯಾಪ್ರಿಲ್ಸ್ ವಿರುದ್ಧ ಸೋತರು. 2014 ರ ವೆನೆಜುವೆಲಾದ ಪ್ರತಿಭಟನೆ ಸಮಯದಲ್ಲಿ ಅವರು ಮಡುರೊ ಸರ್ಕಾರದ ವಿರುದ್ಧ ಪ್ರದರ್ಶನಗಳನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು.
2023 ರಲ್ಲಿ ಮೇರಿ ವಿರೋಧ ಪಕ್ಷದ ಪ್ರಾಥಮಿಕ ಹಂತ ಗೆದ್ದು ದಾಟಿ ಬಂದು 2024 ರ ಅಧ್ಯಕ್ಷೀಯ ಚುನಾವಣೆಗೆ ಏಕಮುಖಿ ಅಭ್ಯರ್ಥಿಯಾದರು. ವೆನೆಜುವೆಲಾ ಸರ್ಕಾರ ತರುವಾಯ ಅವರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಿತು. ನಂತರ, ಮಚಾಡೊ, ಸರ್ವಾಧಿಕಾರಿ ಮಡುರೊ ಆಡಳಿತದಲ್ಲಿ ತಮ್ಮ ಜೀವ ಮತ್ತು ಸ್ವಾತಂತ್ರ‍್ಯದ ಭಯವನ್ನು ಉಲ್ಲೇಖಿಸಿ ತಲೆಮರೆಸಿಕೊಂಡಿರುವುದಾಗಿ ಘೋಷಿಸುತ್ತಾರೆ.
ಆರಂಭಿಕ ಜೀವನ ಶಿಕ್ಷಣ : ಮಾರಿಯಾ ಅವರು 7 ಅಕ್ಟೋಬರ್ 1967 ರಂದು ವೆನೆಜುವೆಲಾದ ಕ್ಯಾರಕಾಸ್‌ನಲ್ಲಿ ಜನಿಸಿದರು. ಪ್ಯಾರಿಕಾ ಅವರ ನಾಲ್ಕು ಮಕ್ಕಳಲ್ಲಿ ಹಿರಿಯವಳು. ಉಕ್ಕಿನ ಉದ್ಯಮಿ ಹೆನ್ರಿಕ್ ಮಚಾಡೊ ಜುಲೋಗಾ (1930-2023) ಅರ್ಮಾಂಡೋ ಜುಲೋಗಾ ಅವರ ಸೋದರಳಿಯ. ವೆನೆಜುವೆಲಾದ ಸರ್ವಾಧಿಕಾರಿ ಜುವಾನ್ ವಿಸೆಂಟೆ ಗೊಮೆಜ್ ವಿರುದ್ಧದ ದಂಗೆಯಲ್ಲಿ ಅವರು ಕೊಲ್ಲಲ್ಪಟ್ಟರು.
ವೈಯಕ್ತಿಕ ಜೀವನ : ಮಚಾಡೊ ವಿಚ್ಛೇದಿತಳಾಗಿದ್ದು, ಮೂವರು ಮಕ್ಕಳಿದ್ದಾರೆ. ತವರಲ್ಲಿ ಕೊಲೆ ಬೆದರಿಕೆ ಇರುವುದರಿಂದ ಆಕೆಯ ಮಕ್ಕಳು ವಿದೇಶದಲ್ಲಿ ವಾಸಿಸುತ್ತಿದ್ದಾರೆ.
ಮರೆಯಲಾಗದ್ದು : 2001 ರಲ್ಲಿ ಹೋಟೆಲ್ ಲಾಬಿಯೊಂದರಲ್ಲಿ ಮಚಾಡೋ ಮತ್ತು ಅಲೆಜಾಂಡ್ರೊ ಪ್ಲಾಜ್ ನಡುವೆ ನಡೆದ ಆತುರದ ಮುಖಾಮುಖಿಯ ಪರಿಣಾಮವಾಗಿ ಸುಮೇಟ್ ಎಂಬ ಸ್ವಯಂಸೇವಕ ನಾಗರಿಕ ಸಂಘಟನೆಯ ಸ್ಥಾಪನೆಯಾಗುತ್ತದೆ. ಅಲ್ಲಿ ಅವರು ವೆನೆಜುವೆಲಾದಲ್ಲಿ ರೂಪಿಸಲಾಗುತ್ತಿರುವ ಹಾದಿಯ ಬಗ್ಗೆ ತಮ್ಮ ಕಳವಳವನ್ನು ಹಂಚಿಕೊಂಡರು.
ಮಚಾಡೋ ನಂತರ ಹೇಳುತ್ತಾರೆ..ಏನೋ ಕ್ಲಿಕ್ ಆಯಿತು. ನಾನು ಮನೆಯಲ್ಲಿಯೇ ಇದ್ದು ದೇಶ ಧ್ರುವೀಕರಣಗೊಂಡು ಕುಸಿಯುವುದನ್ನು ನೋಡಲು ಸಾಧ್ಯವಿಲ್ಲ ಎಂಬ ಆತಂಕ ನನ್ನಲ್ಲಿತ್ತು… ನಾವು ಚುನಾವಣಾ ಪ್ರಕ್ರಿಯೆಯನ್ನು ಉಳಿಸಿಕೊಳ್ಳಬೇಕಾಗಿತ್ತು ಆದರೆ ಹಾದಿಯನ್ನು ಬದಲಾಯಿಸಬೇಕಾಗಿತ್ತು, ವೆನೆಜುವೆಲಾದವರಿಗೆ ನಮ್ಮನ್ನು ನಾವು ಗುರುತಿಸಿಕೊಳ್ಳುವ ಅವಕಾಶವನ್ನು ನೀಡಲು, ಮೊದಲು ಉದ್ವಿಗ್ನತೆಯನ್ನು ಹೋ ಗಲಾಡಿಸಲು ಗುಂಡುಗಳ ಬದಲಿಗೆ ಮತಪತ್ರಗಳ ಆಯ್ಕೆಯಾಗಿತ್ತು.
ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನವಾಗಿರುವ ಮರಿಯಾ ಓರ್ವ ನಿರ್ಭೀತ ಹುಟ್ಟು ಹೋರಾಟಗಾರ್ತಿ. ರಾಕ್-ಸ್ಟಾರ್ ಆಕರ್ಷಣೆಯನ್ನು ಹೊಂದಿರುವ ಮರಿಯಾ ಈಗ ವೆನೆಜುವೆಲಾ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕಿ. ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೋ ಅವರ ಸರ್ವಾಧಿಕಾರದ ವಿರುದ್ಧ ಹೋರಾಡಿದ ಮರಿಯಾ, 2022ರಲ್ಲಿ ಸುಮಾಟೆ ಎಂಬ ಸರ್ಕಾರೇತರ ಸಂಸ್ಥೆಯನ್ನು ಸ್ಥಾಪಿಸಿದರು. ವೆನೆಜುವೆಲಾದಲ್ಲಿ ಚುನಾವಣಾ ಪಾರದರ್ಶಕತೆ ತರುವುದಕ್ಕಾಗಿ ಈ ಸಂಸ್ಥೆ ಹೋರಾಟಗಳನ್ನು, ಜನಾಂದೋಲಗಳನ್ನು ನಡೆಸಿತು.
ವೆನೆಜುವೆಲಾದ ಪ್ರಜಾಪ್ರಭುತ್ವ ಪರ ಚಳವಳಿಯ ಕೇಂದ್ರ ವ್ಯಕ್ತಿಯಾದ ಮರಿಯಾ ಕೊರಿನಾ ಮಚಾಡೊ ಪ್ಯಾರಿಸ್ಕಾ ಲ್ಯಾಟಿನ್ ಅಮೆರಿಕಾದಲ್ಲಿ ನಾಗರಿಕ ಹಕ್ಕಿನ ಹೋರಾಟದ ಪ್ರಮುಖ ಶಕ್ತಿಯಾಗಿದ್ದಾರೆ. ಶಾಂತಿಯುತ ಪ್ರತಿರೋಧ ಮತ್ತು ಮುಕ್ತ ಚುನಾವಣೆಗಳ ಒತ್ತಾಯದ ಮೂಲಕ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದ್ದಾರೆ. 2024ರ ಚುನಾವಣೆಯಲ್ಲಿ ಮಡುರೋ ಅವರನ್ನು ಪ್ರಶ್ನಿಸುವುದನ್ನು ನಿಷೇಧಿಸಲಾಯಿತು. ನಂತರ ವೆನೆಜುವೆಲಾದ ನಾಯಕನಿಗೆ ಪ್ರತಿರೋಧವನ್ನು ಹೆಚ್ಚಿಸಲು ಪ್ರಯತ್ನಿಸಿದ ನಂತರ ಮರಿಯಾರನ್ನು ಬಂಧಿಸಲಾಯಿತು. ಆಮೇಲೆ ಬಿಡುಗಡೆಗೊಳಿಸಲಾಯಿತು. ನಂತರದ್ದು ಇತಿಹಾಸ. ಚರ್ಚೆ, ಮಾತು ಸದಭಿಪ್ರಾಯ ಇದೆಲ್ಲವೂ ಪ್ರಜಾರಾಜ್ಯದ ಖೂಬಿ.. ಜನರ ಎದೆಯ ತೋಟದಲ್ಲಿ ಗುಲಾಬಿ ಹೂವು ಬಿತ್ತಿದ ಮಾರಿಯೋ ಇಂದು ಮನೆ ಮಾತು…
ಮುಂಚೂಣಿ ನಾಯಕಿ: ವೆನೆಜುವೆಲಾ ದಕ್ಷಿಣ ಅಮೆರಿಕ ಖಂಡದ ಉತ್ತರ ಭಾಗದಲ್ಲಿರುವ ಕೆರಿಬ್ಬಿಯನ್ ಸಮುದ್ರದ ಕರಾವಳಿ ದೇಶ. ಗಯಾನಾ ಮತ್ತು ಕೊಲಂಬಿಯಾಗಳೊAದಿಗೆ ಗಡಿವಿವಾದ ಹೊಂದಿದೆ. ಜೊತೆಗೆ ಪೆಟ್ರೋಲಿಯಂ ಉದ್ಯಮ, ಜೀವವೈವಿಧ್ಯ, ಮತ್ತು ನೈಸರ್ಗಿಕ ಸೌಂದರ್ಯದಿಂದ ಗಮನಸೆಳೆಯುತ್ತಿದೆ. ವೆನೆಜುವೆಲಾದ 19ನೇ ಶತಮಾನ ಮತ್ತು 20ನೇ ಶತಮಾನದ ಆರಂಭ ಸರ್ವಾಧಿಕಾರದಿಂದ ತುಂಬಿತ್ತು. ಪ್ರಜಾಪ್ರಭುತ್ವವಾದಿ ಗುಂಪುಗಳು ಕೊನೆಗೂ ಸೇನಾಡಳಿತವನ್ನು ತೆರವುಗೊಳಿಸಿ 1958ರಿಂದ ಪ್ರಜಾಪ್ರಭುತ್ವ ಸ್ಥಾಪಿಸಿದರು. ದೇಶದ ಅಧಿಕೃತ ರಾಷ್ಟ್ರೀಯ ಭಾಷೆ ಸ್ಪಾನಿಷ್ ಆದರೂ 31 ಇತರ ಮೂಲ ಭಾಷೆಗಳು ಅಸ್ತಿತ್ವದಲ್ಲಿವೆ. ಶೇ.96ರಷ್ಟು ಜನತೆ ಕ್ಯಾಥೊಲಿಕ್ ಧರ್ಮದವರಾಗಿದ್ದಾರೆ. ಇಂತಹ ಹಿನ್ನೆಲೆಯಲ್ಲಿ ಉಕ್ಕಿನ ಮಹಿಳೆ ಮತ್ತೋರ್ವ ಮುಂಚೂಣಿ ನಾರಿಮಣಿಯಾಗಿ ಕಂಗೊಳಿ ಸುತ್ತಿದ್ದಾರೆ…
ಶಾಂತಿ ಕಿರೀಟ ಹೊತ್ತ ವೆನೆಜುಲಾ: ವೆನೆಜುಲಾದ ಮಚಾಡೋ ಧೈರ್ಯದ ಖಣಿ. ಅನ್ಯಾಯದ ಮಧ್ಯೆ ನ್ಯಾಯದ ಧ್ವನಿ. ಮೌನದ ಬಂಧನ ಮುರಿದು ಎದ್ದಳು, ಮಾನವ ಹಕ್ಕಿಗೆ ಶಕ್ತಿ ನೀಡಿದಳು | ರಕ್ತ ಹರಿದ ನೆಲದಲಿ ಶಾಂತಿ ಬೀಜ ಬಿತ್ತಿದಳು.
ಜನರ ಚಿಂತನೆಗೆಳೆದು ನಿಟ್ಟುಸಿರಿಟ್ಟಳು. ಅನ್ಯಾಯದ ಕತ್ತಲಲಿ ಹೋರಾಟದ ಮಹಾ ಬೆಳಕು. ಎಲ್ಲ ಜನರ ಹಿತಕ್ಕಾಗಿ ತೋರಿದ ಮಹಾ ತಳುಕು | ಮೌನದ ಸೀಮೆ ಮುರಿದು ಎದ್ದಳು ಧೀಶಕ್ತಿ ಭಯದ ಬಿರುಗಾಳಿಯಲ್ಲಿ ಬಾಗದ ಯುವಶಕ್ತಿ
ಹಿರಿ ಕಿರಿಯರೆಲ್ಲರ ಹೃದ್ಭಾವದ ಕನಸು ನನಸಾಗಿಸಿದ ಧೀಮಂತ ಯುಕ್ತಿ | ವೆನೆಜುಲಾ ಮಚಾಡೊ ನಂದದದೀಪ. ಭಯದ ಬಿರುಗಾಳಿಯಲಿ ಬಾಗದ ರೂಪ. ಸರ್ವರ ಹಿತಕಾಗಿ ಮಾಡಿದ ತ್ಯಾಗ. ನೊಬೆಲ್ ಪ್ರಶಸ್ತಿ ಬಯಸದೆ ಬಂದ ಭಾಗ್ಯ |
ಗುರುನಾಥ ಸುತಾರ. ಹುಲ್ಯಾಳ