ಅಮೆರಿಕದಲ್ಲಿ ಭೂಮಿತ್ರ ಮೂಲಕ ಕನ್ನಡಿಗನ ಕೃಷಿ ಕ್ರಾಂತಿ

0
47
ನವೆಂಬರ್ 14ರಂದು ಸಂಯಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಕನ್ನಡ ನಾಡಿನ ಚಿನ್ನದ ಸಾಧಕರು ಅಡಿ ಪ್ರಕಟವಾದ ಲೇಖನ

ಭೂಮಿತ್ರ ಕಂಪನಿ ಕಟ್ಟಿದ ಬೆಂಗಳೂರಿನ ಹುಡುಗ ಅದಿತ್, ಪ್ರತಿಷ್ಠಿತ ಆರ್ಥ್ಶಾಟ್ ಪ್ರಶಸ್ತಿಗೆ ಭೂಮಿತ್ರ ಭಾಜನ | ಬ್ರೇಜಿಲ್ ಸೇರಿ ಇನ್ನೂ 5 ದೇಶಕ್ಕೆ ಉದ್ಯಮ ವಿಸ್ತರಿಸುವ ಗುರಿ

ಇತ್ತೀಚೆಗೆ ಅಮೆರಿಕದ ಟೈಮ್ಸ್ ಮ್ಯಾಗಝಿನ್ ಪಟ್ಟಿ ಮಾಡಿರುವ ವಿಶ್ವದ ಅತ್ಯಂತ ಪ್ರಭಾವಿ ಕಂಪನಿಗಳ ಪೈಕಿ ಭೂಮಿತ್ರ ಸಂಸ್ಥೆಯೂ ಒಂದಾಗಿದೆ. ಭೂಮಿತ್ರ ಇದು ಬೆಂಗಳೂರಿನ ಹುಡುಗ ಅದಿತ್ ಮೂರ್ತಿ ಸ್ಥಾಪಿಸಿದ ಕಂಪನಿ. ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ಹಿಂದುಳಿದ ಗ್ರಾಮೀಣ ಪ್ರದೇಶಗಳಲ್ಲಿನ ರೈತರಿಗೆ ಭೂಮಿತ್ರ ಕಂಪನಿ ಸಹಾಯಕವಾಗಿದೆ.

ಕೃಷಿ ಭೂಮಿಯ ಮಣ್ಣಿನ ಫಲವತ್ತತೆಗೆ ಸಾಮಾನ್ಯವಾಗಿ ಕಾರ್ಬನ್ ಅಥವಾ ಇಂಗಾಲ ಅತ್ಯಗತ್ಯ. ರೈತರು ತಮ್ಮ ಭೂಮಿಯ ಮಣ್ಣಿನಲ್ಲಿ ಹೆಚ್ಚು ಕಾರ್ಬನ್ ಹಿಡಿದಿಟ್ಟುಕೊಳ್ಳಲು ಭೂಮಿತ್ರ ನೆರವಾಗುತ್ತದೆ. ಇದರಿಂದಾಗಿ ಪರಿಸರದಲ್ಲಿರುವ ಇಂಗಾಲ ಪ್ರಮಾಣ ಕಡಿಮೆಯೂ ಆಗುತ್ತದೆ. ಜೊತೆ ಜೊತೆಗೆ ಕೈಗಾರಿಕೆಗಳಿಗೆ ಅಗತ್ಯವಿರುವ ಕಾರ್ಬನ್ ಕ್ರೆಡಿಟ್‌ನ್ನು ರೈತರು ಮಾರಾಟ ಮಾಡುವ ಅವಕಾಶ ಸಿಗುತ್ತದೆ.

ಇದರಿಂದ ರೈತರ ಆದಾಯ ಹೆಚ್ಚುವುದು, ಅಂತಿಮ ಫಲಿತಾಂಶ. ಇದಕ್ಕೆ ನೆರವಾಗುತ್ತಿರುವುದು ಭೂಮಿತ್ರ ಕಂಪನಿಯ ಕತೆ. ಅಮೆರಿಕದಲ್ಲಿ ಭೂಮಿತ್ರ ಕಂಪನಿಯನ್ನು ಕಟ್ಟಿದ ಕನ್ನಡಿಗ ಅದಿತ್‌ನ ಯಶೋಗಾಥೆ.

ರೈತನ ಆತ್ಮಹತ್ಯೆ, ಚಿಂತೆಗೀಡಾಗಿದ್ದ ಅದಿತ್: ಮೂಲತಃ ಬೆಂಗಳೂರಿನವಾರದ ಅದಿತ್ ಓದಿದ್ದು ಅಮೆರಿಕದ ಪ್ರತಿಷ್ಠಿತ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ. ಅಮೆರಿಕದಲ್ಲೇ ನೆಲೆಸಿದ್ದ ಅವರು ವರ್ಷದಲ್ಲಿ ಮೂರ್ನಾಲ್ಕು ತಿಂಗಳಾದರೂ ಬೆಂಗಳೂರಿನಲ್ಲಿ ಕಾಲ ಕಳೆಯುವುದು ಮೊದಲಿನಿಂದಲೂ ಬಂದ ರೂಢಿ. ಹೀಗೆ ಒಮ್ಮೆ ಕರ್ನಾಟಕಕ್ಕೆ ಬಂದಿದ್ದ ಅದಿತ್ ಅವರ ತಂದೆಯ ಹುಟ್ಟೂರಿನಲ್ಲಿ ಬೆಳೆ ಇಳುವರಿ ಕಡಿಮೆ ಆದ ಕಾರಣ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡದ್ದನ್ನು ನೋಡಿದರು.

ಈ ಘಟನೆ ಅದಿತ್‌ರನ್ನು ಚಿಂತೆಗೀಡು ಮಾಡಿತು. ಮಣ್ಣಿನ ಫಲವತ್ತತೆ ಹೆಚ್ಚಿಸುವ ಮತ್ತು ರೈತರ ಕಷ್ಟಗಳನ್ನು ನೀಗಿಸುವ ಉದ್ದೇಶದಿಂದ ಅದಿತ್ 2016ರಲ್ಲಿ ಭೂಮಿತ್ರ ಸಂಸ್ಥೆ ಆರಂಭಿಸಿ ಸಂಶೋಧನೆಯಲ್ಲಿ ತೊಡಗಿದರು. ಅದಿತ್ ಅವರೇ ಹೇಳುವಂತೆ ನಾವು ಪ್ರತಿದಿನ ತಿನ್ನುವ ಆಹಾರ ಬೆಳೆವ ರೈತರ ಬೆಂಬಲ ಇಲ್ಲದೇ ನಾವು ಭೂಮಿಯನ್ನು ಸಂರಕ್ಷಿಸಲು ಸಾಧ್ಯವಿಲ್ಲ.

ಭೂಮಿತ್ರ ಎಐ ಆಧಾರಿತ ತಂತ್ರಜ್ಞಾನದ ಸಹಾಯದೊಂದಿಗೆ ಮಣ್ಣಿನ ಫಲವತ್ತತೆ ಹೆಚ್ಚಿಸಿ, ಬೆಳೆಯ ಇಳುವರಿ ಹೆಚ್ಚಿಸಲು ನೆರವಾಗುತ್ತದೆ. ಇದರಿಂದ ಕಾರ್ಬನ್ ಸಂಗ್ರಹವೂ ಆಗುತ್ತದೆ ಎನ್ನುತ್ತಾರೆ.

ಸಂಗೀತದಲ್ಲೂ ಆಸಕ್ತಿ: ಅಮೆರಿಕದಲ್ಲಿ ಭೂಮಿತ್ರ ಎಂಬ ನವೋದ್ಯಮ ಆರಂಭಿಸಿ ಯಶಸ್ವಿ ಉದ್ಯಮಿಯಾದ ಕರ್ನಾಟಕ ಮೂಲದ ಅದಿತ್ ಸಂಗೀತಗಾರರು ಹೌದು. ವರ್ಷಕ್ಕೊಮ್ಮೆಯಾದರೂ ಬೆಂಗಳೂರಿಗೆ ಬರುವ ಅದಿತ್ ತಮ್ಮ ಸಂಗೀತ ಗುರುಗಳ ಬಳಿ ತಿಂಗಳುಗಳ ಕಾಲ ಸಂಗೀತ ಪಾಠ ಹೇಳಿಸಿಕೊಳ್ಳುತ್ತಾರೆ. ಅವರೇ ಹೇಳಿಕೊಂಡಂತೆ ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿ ಇದೆ. ಶಿಕ್ಷಣ, ಉದ್ಯೋಗ ದೃಷ್ಟಿಯಿಂದ ಅಮೆರಿಕದಲ್ಲಿ ನೆಲೆಸಿದ್ದರೂ ಹಾಡುವುದನ್ನು ಎಂದಿಗೂ ಮರೆತಿಲ್ಲ.

ನವೋದ್ಯಮದ ಒತ್ತಡದ ಬದುಕಿನ ನಡುವೆಯೂ ಬೆಂಗಳೂರಿನಲ್ಲಿರುವ ಸಂಗೀತ ಗುರುಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ಆನ್‌ಲೈನ್ ಮೂಲಕ ನಿತ್ಯವೂ ಪಾಠ ನಡೆಯುತ್ತದೆ. ಹೀಗಾಗಿ ನಾನನು ಯಾವತ್ತಿಗೂ ಮೊದಲು ಸಂಗೀತಗಾರ, ನಂತರ ಪ್ರವಾಸಿಗ, ಆಮೇಲೆ ಭೂಮಿತ್ರ ಸಂಸ್ಥಾಪಕ ಎಂದು ಹೇಳುತ್ತಾರೆ.

ಏನಿದು ಭೂಮಿತ್ರ ತಂತ್ರಜ್ಞಾನ: ಕೃಷಿ ಭೂಮಿಯ ಮಣ್ಣಿನ ಫಲವತ್ತತೆ ಹೇಗಿದೆ ಎಂಬುದನ್ನು ಮಣ್ಣಿನ ಪರೀಕ್ಷೆ ಮಾಡದೇ ಎಐ ತಂತ್ರಜ್ಞಾನ ಭೂಮಿತ್ರ ಬಳಸುತ್ತದೆ. ಆದಿತ್ ಅವರ ಸಂಶೋಧನೆಯಿಂದ ಮಣ್ಣನ್ನು ಲ್ಯಾಬ್‌ಗೆ ತೆಗೆದುಕೊಂಡು ಹೋಗದೇ ಹೈ ರೆಸಲ್ಯೂಷನ್ ಸ್ಯಾಟಲೈಟ್ ಚಿತ್ರಗಳ ಮೂಲಕ ಮಣ್ಣಿನ ಸಾರ ಪತ್ತೆ ಹಚ್ಚುನ ವಿನೂತನ ವಿಧಾನವನ್ನು ಭೂಮಿತ್ರ ಆವಿಷ್ಕರಿಸಿದೆ.

ಇದರಿಂದಾಗಿ ಮಣ್ಣಿನಲ್ಲಿ ಕಾರ್ಬನ್ ಹಿಡಿದಿಡಿಲು ಏನು ಮಾಡಬೇಕು, ಯಾವೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬುದನ್ನು ರೈತರಿಗೆ ಭೂಮಿತ್ರ ಮಾಹಿತಿ ನೀಡುತ್ತದೆ. ಕೃಷಿಭೂಮಿ ಪರಿಸರಿಂದ ಎಷ್ಟು ಕಾರ್ಬನ್ ಹೀರಿಕೊಂಡಿದೆ ಅನ್ನೋದನ್ನು ಪರಿಶೀಲಿಸಿ ಕಾರ್ಬನ್ ಕ್ರೆಡಿಟ್ ನೀಡಲಾಗುತ್ತದೆ. ವಿಶ್ವಸಂಸ್ಥೆ ನಿಯಮದ ಪ್ರಕಾರ ಪರಿಸರಕ್ಕೆ ಮಾರಕವಾಗುವ ಕೈಗಾರಿಕೆಗಳು ಕಾರ್ಬನ್ ಕ್ರೆಡಿಟ್ ಖರೀದಿಸಬೇಕು. ಹೀಗಾಗಿ, ಅಮೆರಿಕ ಮೊದಲಾದೆಡೆ ಕಾರ್ಬನ್ ಕ್ರೆಡಿಟ್ ಒಳ್ಳೆಯ ಬಿಸಿನೆಸ್ ಆಗಿದೆ. ಭೂಮಿತ್ರ ಸಂಸ್ಥೆ ರೈತರ ಮಣ್ಣಿನಲ್ಲಿ ಸೃಷ್ಟಿಯಾದ ಕಾರ್ಬನ್ ಕ್ರೆಡಿಟ್ ಅನ್ನು ಕೈಗಾರಿಕೆಗಳಿಗೆ ಮಾರುತ್ತದೆ. ಇದರಲ್ಲಿ ಬಂದ ಆದಾಯದಲ್ಲಿ ಬಹುಪಾಲನ್ನು ರೈತರಿಗೆ ನೀಡುತ್ತದೆ. ಇದರಿಂದ ರೈತರಿಗೆ ಕಾರ್ಬನ್ ಕ್ರೆಡಿಟ್‌ನಿಂದಲೂ ಆದಾಯ ಸಿಗುತ್ತದೆ.

Previous articleಫೋಟೋಗಾಗಿ ವಿದೇಶಿ ಮಹಿಳೆಯರಿಗೆ ಕಿರುಕುಳ: ಮೂವರ ಬಂಧನ
Next articleಬಿಹಾರದಲ್ಲಿ ಕೇಸರಿ-ಹಸಿರು ಅಬ್ಬರ: ಎನ್‌ಡಿಎಗೆ ಸ್ಪಷ್ಟ ಮುನ್ನಡೆ, ತೇಜಸ್ವಿ-ತೇಜ್ ಪ್ರತಾಪ್‌ಗೆ ಭಾರೀ ಹಿನ್ನಡೆ!

LEAVE A REPLY

Please enter your comment!
Please enter your name here