ನವದೆಹಲಿ: ನನ್ನನ್ನು ಕರಾಚಿಯಲ್ಲಿ ಬಿಟ್ಟು ನನ್ನ ಪತಿ ದೆಹಲಿಯಲ್ಲಿ ರಹಸ್ಯವಾಗಿ ಎರಡನೇ ವಿವಾಹಕ್ಕೆ ಸಿದ್ಧತೆ ನಡೆಸಿದ್ದಾನೆ. ದಯವಿಟ್ಟು ನನಗೆ ನ್ಯಾಯ ದೊರಕಿಸಿ ಕೊಡಿ ಎಂದು ಪಾಕಿಸ್ತಾನದ ಮಹಿಳೆಯೊಬ್ಬರು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೇಳಿಕೊಂಡಿದ್ದಾರೆ.
ನಿಕಿತಾ ನಾಗ್ದೇವ್ ಎನ್ನುವ ಮಹಿಳೆ ತನ್ನ ಪತಿ ದೆಹಲಿಯಲ್ಲಿ ಮದುವೆಯಾಗುತ್ತಿರುವ ಕುರಿತು ಪ್ರಧಾನಿ ಮೋದಿಯವರಿಂದ ನ್ಯಾಯ ಕೋರಿ ಹತಾಶೆಯ ವೀಡಿಯೊವೊಂದನ್ನು ಬಿಡುಗಡೆ ಮಾಡಿದ್ದಾರೆ.
ಕರಾಚಿ ನಿವಾಸಿಯಾಗಿರುವ ನಿಕಿತಾ, ಜನವರಿ 26, 2020 ರಂದು ಇಂದೋರ್ ನಿವಾಸಿ ಪಾಕಿಸ್ತಾನಿ ಮೂಲದ ವಿಕ್ರಮ್ ನಾಗ್ದೇವ್ ಎನ್ನುವವರೊಂದಿಗೆ ಕರಾಚಿಯಲ್ಲಿಯೇ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಒಂದು ತಿಂಗಳ ಬಳಿಕ ಫೆಬ್ರುವರಿಯಲ್ಲಿ ವಿಕ್ರಮ್ ಮತ್ತು ನಿಕಿತಾ ಒಟ್ಟಿಗೆ ಭಾರತಕ್ಕೆ ಬಂದಿದ್ದಾರೆ. ಆದರೆ ಕೆಲ ತಿಂಗಳಲ್ಲಿಯೇ ಪರಿಸ್ಥಿತಿ ಬದಲಾಗಿದ್ದು, 2020ರ ಜುಲೈ 9ರಂದು ವೀಸಾ ತಾಂತ್ರಿಕ ನೆಪವೊಡ್ಡಿ ಅಟ್ಟಾರಿ ಗಡಿಯಲ್ಲಿ ನನ್ನನ್ನು ಕೈಬಿಡಲಾಯಿತು ಎಂದು ನಿಕಿತಾ ಆರೋಪಿಸಿದ್ದಾರೆ.
ಭಾರತಕ್ಕೆ ನನ್ನನ್ನು ಕರೆಯುವಂತೆ ವಿನಂತಿಸುತ್ತಲೇ ಇದ್ದೆ, ಇದುವರೆಗೂ ನನ್ನ ಮರಳಿ ಕರೆತರುವ ಪ್ರಯತ್ನವನ್ನು ವಿಕ್ರಮ್ ಮಾಡಿಲ್ಲ ಎಂದು ನಿಕಿತಾ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.
“ನನಗೆ ನ್ಯಾಯ ಸಿಗದಿದ್ದರೆ, ಮಹಿಳೆಯರು ಇಂದು ನ್ಯಾಯದ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಾರೆ. ಮಹಿಳೆಯರು ತಮ್ಮ ವೈವಾಹಿಕ ಜೀವನದಲ್ಲಿ ದೈಹಿಕ, ಮಾನಸಿಕ ಕಿರುಕುಳ ಎದುರಿಸುತ್ತಾರೆ. ಎಲ್ಲರೂ ನನ್ನೊಂದಿಗೆ ನಿಲ್ಲಬೇಕೆಂದು ನಾನು ಒತ್ತಾಯಿಸುತ್ತೇನೆ” ಎಂದು ನಿಕಿತಾ ಮನವಿ ಮಾಡಿದ್ದಾರೆ.
ಪಾಕಿಸ್ತಾನಕ್ಕೆ ಗಡೀಪಾರು ಮಾಡಲು ಶಿಪಾರಸು!: ಜನವರಿ 27, 2025ರಂದು ನಿಕಿತಾ ಅಧಿಕೃತ ದೂರು ದಾಖಲಿಸಿದ್ದಾರೆ. ಈ ಪ್ರಕರಣವನ್ನು ಮಧ್ಯಪ್ರದೇಶ ಹೈಕೋರ್ಟ್‌ನಿಂದ ಅಧಿಕಾರ ಪಡೆದ ಸಿಂಧಿ ಪಂಚ ಮಧ್ಯಸ್ಥಿಕೆ ಮತ್ತು ಕಾನೂನು ಸಲಹೆ ಕೇಂದ್ರಕ್ಕೆ ತಲುಪಿದ್ದು, ನೋಟಿಸ್ ನೀಡಲಾಗಿತ್ತು. ಬಳಿಕ ವಿಚಾರಣೆ ನಡೆಸಿದಾಗ ಮಧ್ಯಸ್ಥಿಕೆ ಕೂಡ ವಿಫಲವಾಯಿತು. ಅಂತಿಮವಾಗಿ 2025ರ ಏಪ್ರಿಲ್ 30 ರಂದು ಇಬ್ಬರೂ ಸಂಗಾತಿಗಳು ಭಾರತೀಯ ನಾಗರಿಕರಲ್ಲದ ಕಾರಣ ಪ್ರಕರಣವು ಪಾಕಿಸ್ತಾನದ ನ್ಯಾಯವ್ಯಾಪ್ತಿಗೆ ಬರುವುದು ಎಂದು ವಿಕ್ರಮ್ ಅವರನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಲು ಶಿಫಾರಸು ಮಾಡಲಾಗಿತ್ತು.

















