Home ಸುದ್ದಿ ದೇಶ ಜಾಗತಿಕ ಒತ್ತಡದ ನಡುವೆ ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ: S-400 ಮತ್ತು Su-57 ಮೇಲೆ ಜಗತ್ತಿನ...

ಜಾಗತಿಕ ಒತ್ತಡದ ನಡುವೆ ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ: S-400 ಮತ್ತು Su-57 ಮೇಲೆ ಜಗತ್ತಿನ ಕಣ್ಣು, ಮೋದಿ ಜೊತೆ 23ನೇ ವಾರ್ಷಿಕ ಶೃಂಗಸಭೆ

0

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಗುರುವಾರ ಸಂಜೆ ರಾಷ್ಟ್ರ ರಾಜಧಾನಿ ದೆಹಲಿಗೆ ಬಂದಿಳಿದಿದ್ದಾರೆ.

ರಷ್ಯಾವು ಉಕ್ರೇನ್ ಯುದ್ಧದಲ್ಲಿ ಸಾಧಿಸಿದ ಮೇಲುಗೈಯಿಂದ ಉತ್ಸಾಹದಲ್ಲಿರುವ ಈ ಸಮಯದಲ್ಲಿ ನಡೆಯುತ್ತಿರುವ ಪುಟಿನ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಈ ಉನ್ನತ ಮಟ್ಟದ ಸಭೆಯತ್ತ ಇಡೀ ಜಗತ್ತಿನ ಚಿತ್ತ ನೆಟ್ಟಿದೆ.

ಶುಕ್ರವಾರ (ಡಿಸೆಂಬರ್ 5) ಮೋದಿ ಅವರೊಂದಿಗೆ ಶೃಂಗಸಭೆಯಲ್ಲಿ ಭಾಗವಹಿಸಲಿರುವ ಪುಟಿನ್, S-400 ವಾಯು ರಕ್ಷಣಾ ವ್ಯವಸ್ಥೆ ಮತ್ತು ಹೊಸದಾಗಿ ಸುಖೋಯ್ Su-57 ಯುದ್ಧ ವಿಮಾನಗಳ ಖರೀದಿಯಂತಹ ಪ್ರಮುಖ ರಕ್ಷಣಾ ಒಪ್ಪಂದಗಳ ಕುರಿತು ಮಾತುಕತೆ ನಡೆಸುವ ನಿರೀಕ್ಷೆಯಿದೆ. ಭಾರತವು ರಷ್ಯಾದ ಪ್ರಮುಖ ರಕ್ಷಣಾ ಪಾಲುದಾರ ರಾಷ್ಟ್ರವಾಗಿದೆ.

2021ರ ಭೇಟಿಯ ಮೆಲುಕು: ಪುಟಿನ್ ಅವರ ಇದು, ಕಳೆದ ನಾಲ್ಕು ವರ್ಷಗಳಲ್ಲಿ ಭಾರತಕ್ಕೆ ಎರಡನೇ ಭೇಟಿಯಾಗಿದೆ. ಕೊನೆಯ ಬಾರಿ 2021ರ ಡಿಸೆಂಬರ್ 6 ರಂದು 21ನೇ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.

ಕೋವಿಡ್ ಕಾರಣದಿಂದ ಕೇವಲ ಐದು ತಾಸಿಗೆ ಮೊಟಕುಗೊಂಡಿದ್ದ ಆ ಭೇಟಿಯಲ್ಲಿ, ಉಭಯ ನಾಯಕರು ರಕ್ಷಣೆ, ಇಂಧನ ಮತ್ತು ದೀರ್ಘಕಾಲದ ಕಾರ್ಯತಂತ್ರದ ಪಾಲುದಾರಿಕೆ ಕುರಿತು ಚರ್ಚಿಸಿದ್ದರು.

ಆಗ 2+2 ಸಂವಾದ ಆರಂಭಿಸುವ ಮತ್ತು ಮಿಲಿಟರಿ ತಾಂತ್ರಿಕ ಸಹಕಾರ ವಿಸ್ತರಿಸುವ ಕುರಿತು ಮಾತುಕತೆ ನಡೆದಿತ್ತು. ಅಫ್ಘಾನಿಸ್ತಾನದ ಸ್ಥಿತಿ, ಕೋವಿಡ್ ನಂತರದ ಆರ್ಥಿಕ ಚೇತರಿಕೆ, ಮತ್ತು INSTC (ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್) ಮೂಲಕ ಸಂಪರ್ಕ ಬಲಪಡಿಸುವ ಕುರಿತು ಸಮ್ಮತಿಸಲಾಗಿತ್ತು.

ಆ ಭೇಟಿಯ ಮೂರೇ ತಿಂಗಳ ನಂತರ ರಷ್ಯಾ ಉಕ್ರೇನ್ ವಿರುದ್ಧ ಸೇನಾ ಕಾರ್ಯಾಚರಣೆ ಆರಂಭಿಸಿತ್ತು.

ಅಮೆರಿಕದ ಒತ್ತಡ ಮತ್ತು ತೈಲ ಖರೀದಿ: ಉಕ್ರೇನ್ ಸಂಘರ್ಷದ ನಂತರ ಜಾಗತಿಕ ಸಮುದಾಯ ರಷ್ಯಾ ಮೇಲೆ ನಿರ್ಬಂಧ ವಿಧಿಸಿರುವ ಕಾರಣ, ರಷ್ಯಾ ರಿಯಾಯಿತಿ ದರದಲ್ಲಿ ಭಾರತಕ್ಕೆ ತೈಲ ಪೂರೈಸುತ್ತಿದ್ದು, ಭಾರತವು ದೊಡ್ಡ ಪ್ರಮಾಣದಲ್ಲಿ ರಷ್ಯಾದ ತೈಲವನ್ನು ಖರೀದಿಸುತ್ತಿದೆ.

ಈ ಹಿನ್ನೆಲೆಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸುವಂತೆ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ, ಈ ಶೃಂಗಸಭೆ ಆರ್ಥಿಕ ಮತ್ತು ರಾಜಕೀಯ ದೃಷ್ಟಿಕೋನದಿಂದ ಮಹತ್ವ ಪಡೆದುಕೊಂಡಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version