Home ಅಪರಾಧ ತ್ರಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ತಾತಾ, ಮೊಮ್ಮಗ ಸಾವು

ತ್ರಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ತಾತಾ, ಮೊಮ್ಮಗ ಸಾವು

0

ದಾವಣಗೆರೆ: ತ್ರಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದು ಎರಡು ವರ್ಷದ ಮಗು ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಗಾಂಧಿನಗರ ಗ್ರಾಮದ ಬಳಿ ಗುರುವಾರ ಸಂಭವಿಸಿದೆ.
ತಾಲೂಕಿನ ತೋಳಹುಣಿಸೆ ಗ್ರಾಮದ ಚಂದ್ರಾನಾಯ್ಕ(50), ಮೊಮ್ಮಗ ಯುವರಾಜ್(02) ಮೃತಪಟ್ಟವರು. ಮೃತಪಟ್ಟ ಚಂದ್ರಾ ನಾಯ್ಕ ಪುತ್ರ ಪ್ರೀತಂ(18) ಹಾಗೂ ಪತ್ನಿ ರೇಣುಕಾ ಬಾಯಿ(40) ತೀವ್ರ ಗಾಯಗೊಂಡಿದ್ದು, ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಜಗಳೂರು ಕಡೆಯಿಂದ ದಾವಣಗೆರೆ ಕಡೆಗೆ ಅಂಗವಿಕಲ ವ್ಯಕ್ತಿ ತನ್ನ ತ್ರಿಚಕ್ರ ಬೈಕ್‌ನಲ್ಲಿ ಪತ್ನಿ, ಪುತ್ರ, ಮೊಮ್ಮಗ ಒಟ್ಟು ನಾಲ್ಕು ಜನ ಪ್ರಯಾಣ ಬೆಳೆಸಿದ್ದರು. ನೈಸರ್ಗಿಕ ಕರೆ ಹಿನ್ನೆಲೆಯಲ್ಲಿ ರಸ್ತೆಯ ಬದಿಯಲ್ಲಿ ತ್ರಿಚಕ್ರ ವಾಹನ ನಿಲ್ಲಿಸಿದ್ದರು. ನಿಲ್ಲಿಸಿದ ತ್ರಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಪಲ್ಟಿಯಾಗಿದ್ದು ಸಣ್ಣಪುಟ್ಟ ಗಾಯಗೊಂಡ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಘಟನಾ ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಡಿವೈಎಸ್ಪಿ ಬಿ.ಎಸ್. ಬಸವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಕುರಿತು ದಾವಣಗೆರೆ ಗ್ರಾಮಾಂತರ‌‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version