ಬೆಂಗಳೂರು: ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಹು ನಿರೀಕ್ಷಿತ 47ನೇ ಸಿನಿಮಾ ‘ಮಾರ್ಕ್’ ಟ್ರೇಲರ್ ಬಿಡುಗಡೆಯಾಗಿದೆ. ಇದು ಆ್ಯಕ್ಷನ್ ಪ್ರಿಯರಿಗೆ ದೃಶ್ಯ ವೈಭವದ ಭರವಸೆ ನೀಡಿದೆ. ಟ್ರೇಲರ್‌ನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಸುದೀಪ್ ಅಜಯ್ ಮಾರ್ಕಾಂಡೇಯ ಉರ್ಫ್ ಮಾರ್ಕ್ ಎಂಬ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದಾರೆ.
ಟ್ರೇಲರ್‌ನ ಮೊದಲ ನೋಟದಲ್ಲಿಯೇ ಈ ಸಿನಿಮಾವು ಮಕ್ಕಳ ಕಳ್ಳಸಾಗಾಣಿಕೆ ಜಾಲವನ್ನು ಭೇದಿಸುವ ಗಂಭೀರ ಮತ್ತು ಆ್ಯಕ್ಷನ್ ಪ್ಯಾಕ್ಡ್ ಕಥಾಹಂದರವನ್ನು ಹೊಂದಿದೆ ಎಂದು ಖಚಿತವಾಗುತ್ತದೆ. ಪೊಲೀಸ್ ಅಧಿಕಾರಿಯಾಗಿ ಸುದೀಪ್ ಆವೇಶಭರಿತ ನಟನೆ, ಹಾಗೂ ಡೈಲಾಗ್ ಡೆಲಿವರಿ ಮತ್ತು ಪವರ್‌ಫುಲ್ ಆ್ಯಕ್ಷನ್ ದೃಶ್ಯಗಳು ಟ್ರೇಲರ್‌ಗೆ ದೊಡ್ಡ ಮಟ್ಟದ ಕಿಕ್ ನೀಡಿದೆ.
ವಿಶೇಷವಾಗಿ, ಹಿನ್ನಲೆ ಸಂಗೀತ ಚಿತ್ರದ ಆ್ಯಕ್ಷನ್ ದೃಶ್ಯಗಳ ತೀವ್ರತೆಯನ್ನು ಹೆಚ್ಚಿಸಿರುವುದು ಗಮನ ಸೆಳೆಯುತ್ತದೆ.
ವಿಜಯ್ ಕಾರ್ತಿಕೇಯ-ಸುದೀಪ್ ಕಾಂಬಿನೇಷನ್ ಮರುಕಳಿಕೆ: ಕಿಚ್ಚ ಸುದೀಪ್ ಈ ಹಿಂದೆ ‘ಮ್ಯಾಕ್ಸ್’ ಸಿನಿಮಾದಲ್ಲಿ ಕೂಡ ಪೊಲೀಸ್ ಅಧಿಕಾರಿಯಾಗಿಯೇ ಕಾಣಿಸಿಕೊಂಡಿದ್ದರು. ಈಗ ಮತ್ತೆ ‘ಮಾರ್ಕ್’ ಸಿನಿಮಾ ಕೂಡ ಅದೇ ಆಕ್ಷನ್ ಲೈನ್‌ನಲ್ಲಿ ಮುಂದುವರೆದಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ ಎನ್ನಲಾಗುತ್ತಿದೆ.
‘ಮಾರ್ಕ್’ ಸಿನಿಮಾಗೆ ತಮಿಳಿನ ಖ್ಯಾತ ನಿರ್ದೇಶಕ ವಿಜಯ್ ಕಾರ್ತಿಕೇಯ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಲ್ಲದೆ, ಸುದೀಪ್ ನಟನೆಯ ಹಿಂದಿನ ಹಿಟ್ ಸಿನಿಮಾಗಳಿಗೂ ಹಾಗೂ’ಮ್ಯಾಕ್ಸ್’ಗೂ ನಿರ್ದೇಶನ ಮಾಡಿದ್ದರು. ಈ ಯಶಸ್ವಿ ಕಾಂಬಿನೇಷನ್ ಪುನರಾವರ್ತನೆಯಾಗುತ್ತಿರುವುದರಿಂದ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ಪ್ರತಿಷ್ಠಿತ ಸತ್ಯಜ್ಯೋತಿ ಫಿಲ್ಮ್ಸ್ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿಬಂದಿದೆ. ಹಾಗೇ ‘ಕಾಂತಾರ’ ಮತ್ತು ‘ವಿಕ್ರಾಂತ್ ರೋಣ’ ಸಿನಿಮಾಗಳ ಮೂಲಕ ಗಮನ ಸೆಳೆದಿರುವ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಟ್ರೇಲರ್‌ನಲ್ಲಿ ಕೇಳಿಬರುವ ಬಿಜಿಎಂ ಸಿನಿಮಾಕ್ಕೆ ದೊಡ್ಡ ಬಲ ತುಂಬಿದೆ.
ಬಹುನಿರೀಕ್ಷಿತ ‘ಮಾರ್ಕ್’ ಸಿನಿಮಾವು ಡಿಸೆಂಬರ್ 25 ರಂದು ವಿಶ್ವಾದ್ಯಂತ ತೆರೆ ಕಾಣಲು ಸಜ್ಜಾಗಿದೆ. ಸುದೀಪ್ ಅವರ ಖಡಕ್ ಪೊಲೀಸ್ ಅವತಾರವನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.




















