ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಶುಭಾ ಪೂಂಜಾ ಅವರು ತಮ್ಮ ವೈವಾಹಿಕ ಜೀವನಕ್ಕೆ ವಿದಾಯ ಹೇಳಲು ಮುಂದಾಗಿದ್ದಾರೆ ಎಂಬ ಶಾಕಿಂಗ್ ಸುದ್ದಿಯೊಂದು ಗಾಂಧಿನಗರದಿಂದ ಕೇಳಿಬರುತ್ತಿದೆ. ತಮ್ಮ ಪತಿ ಸುಮಂತ್ ಬಿಲ್ಲವ ಅವರಿಂದ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆಯಲು ಶುಭಾ ಪೂಂಜಾ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂಬ ಸುದ್ದಿ ಸಾಕಷ್ಟು ವೈರಲ್ ಆಗುತ್ತಿದೆ.
ಕಳೆದ 2022ರ ಜನವರಿ 5 ರಂದು ಅತ್ಯಂತ ಸರಳವಾಗಿ, ಆಪ್ತರ ಸಮ್ಮುಖದಲ್ಲಿ ಮದುವೆಯಾಗಿದ್ದ ಈ ಜೋಡಿ, ನಾಲ್ಕು ವರ್ಷಗಳು ತುಂಬುವ ಮುನ್ನವೇ ಪ್ರತ್ಯೇಕವಾಗಲು ನಿರ್ಧರಿಸಿರುವುದು ಅವರ ಅಭಿಮಾನಿಗಳಿಗೆ ತೀವ್ರ ನಿರಾಶೆ ಮೂಡಿಸಿದೆ. ಪ್ರಸ್ತುತ ಇಬ್ಬರೂ ಪರಸ್ಪರ ಒಪ್ಪಿಗೆಯ ವಿಚ್ಛೇದನಕ್ಕಾಗಿ (Mutual Consent Divorce) ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದು, ಕಾನೂನು ಪ್ರಕ್ರಿಯೆಯ ಭಾಗವಾಗಿ ಮುಂಬರುವ ದಿನಗಳಲ್ಲಿ ಕೋರ್ಟ್‌ಗೆ ಹಾಜರಾಗಲಿದ್ದಾರೆ ಎನ್ನಲಾಗಿದೆ. ಆದರೆ, ಈ ಜೋಡಿ ದೂರಾಗಲು ನಿಖರವಾದ ಕಾರಣವೇನು ಎಂಬುದು ಇನ್ನು ನಿಗೂಢವಾಗಿಯೇ ಉಳಿದಿದ್ದು, ಶುಭಾ ಪೂಂಜಾ ಆಗಲಿ ಅಥವಾ ಉಡುಪಿ ಮೂಲದ ಉದ್ಯಮಿ ಹಾಗೂ ಕನ್ನಡಪರ ಹೋರಾಟಗಾರರಾಗಿರುವ ಸುಮಂತ್ ಬಿಲ್ಲವ ಅವರಾಗಲಿ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಶುಭಾ ಪೂಂಜಾ ಅವರು ಮಾಡೆಲಿಂಗ್ ಕ್ಷೇತ್ರದಿಂದ ಚಿತ್ರರಂಗಕ್ಕೆ ಕಾಲಿಟ್ಟವರು. ‘ಮೊಗ್ಗಿನ ಮನಸು’ ಚಿತ್ರದ ಅದ್ಭುತ ನಟನೆಗಾಗಿ ಫಿಲ್ಮ್ ಫೇರ್ ಪ್ರಶಸ್ತಿ ಮುಡಿಗೇರಿಸಿಕೊಂಡ ಇವರು, ‘ಚಂಡ’, ‘ಸ್ಲಮ್ ಬಾಲ’, ‘ತಾಕತ್’ ನಂತಹ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಇನ್ನು ‘ಬಿಗ್ ಬಾಸ್ ಕನ್ನಡ ಸೀಸನ್ 8’ ಇವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು. ಬಿಗ್ ಬಾಸ್ ಮನೆಯಲ್ಲಿ ತಮ್ಮ ಮುಗ್ಧ ಹಾಗೂ ನೇರಾನೇರ ಸ್ವಭಾವದಿಂದ ಪ್ರೇಕ್ಷಕರ ಮನಗೆದ್ದ ಶುಭಾ, ನಂತರದ ದಿನಗಳಲ್ಲಿ ಕಿರುತೆರೆ ಮತ್ತು ಯುಟ್ಯೂಬ್ ವಾಹಿನಿಗಳ ಮೂಲಕ ಸದಾ ಸಕ್ರಿಯರಾಗಿದ್ದರು. ಇತ್ತೀಚೆಗಷ್ಟೇ ಬಿಗ್ ಬಾಸ್ ಸೀಸನ್ 10ರಲ್ಲಿ ಅತಿಥಿ ನಿರೂಪಕಿಯಾಗಿಯೂ ಅವರು ಕಾಣಿಸಿಕೊಂಡಿದ್ದರು.
ಇತ್ತೀಚಿನ ದಿನಗಳಲ್ಲಿ ಶುಭಾ ಪೂಂಜಾ ಅವರಿಗೆ ವೈಯಕ್ತಿಕವಾಗಿ ಸಾಲು ಸಾಲು ಆಘಾತಗಳು ಎದುರಾಗುತ್ತಿವೆ. ಕೆಲವೇ ತಿಂಗಳುಗಳ ಹಿಂದಷ್ಟೇ, ಅಂದರೆ ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಅವರು ತಮ್ಮ ಪ್ರೀತಿಯ ತಾಯಿಯನ್ನು ಕಳೆದುಕೊಂಡಿದ್ದರು. ತಾಯಿಯ ಅಗಲಿಕೆಯ ದುಃಖದಿಂದ ಇನ್ನು ಹೊರಬರುವ ಮುನ್ನವೇ ಈಗ ಪತಿಯಿಂದ ದೂರಾಗುತ್ತಿರುವ ಸುದ್ದಿ ಹೊರಬಿದ್ದಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಸದ್ಯಕ್ಕೆ ವೈಯಕ್ತಿಕ ಏರುಪೇರುಗಳ ನಡುವೆಯೂ ಶುಭಾ ಪೂಂಜಾ ಅವರು ತಮ್ಮ ವೃತ್ತಿಜೀವನದ ಕಡೆಗೆ ಗಮನ ಹರಿಸುತ್ತಿದ್ದು, ಅವರು ನಟಿಸಿ, ಅಸೋಸಿಯೇಟ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿರುವ ‘3ದೇವಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ವಿಚ್ಛೇದನದ ಸುದ್ದಿ ನಿಜಾನಾ ಅಥವಾ ಸುಳ್ಳ ಎಂಬುದರ ಬಗ್ಗೆ ದಂಪತಿಗಳು ಮುಂದಿನ ದಿನಗಳಲ್ಲಿ ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.






















