ನಿರ್ದೇಶನ: ಸಿಂಪಲ್ ಸುನಿ
ನಿರ್ಮಾಣ: ದೀಪಕ್ ತಿಮ್ಮಯ್ಯ, ಸಿಂಪಲ್ ಸುನಿ
ತಾರಾಗಣ: ದುಷ್ಯಂತ್, ಆಶಿಕಾ ರಂಗನಾಥ್, ಸುಧಾ ಬೆಳವಾಡಿ, ಕೃಷ್ಣ ಹೆಬ್ಬಾಳೆ, ಕೃಷ್ಣ ರಾವ್ ಹಾಗೂ ಕಿಶನ್ ಇತರರು.
ರೇಟಿಂಗ್-3.5
ಗಣೇಶ್ ರಾಣೆಬೆನ್ನೂರು
ಒಂದೇ ಸಿನಿಮಾದಲ್ಲಿ ಮೂರ‍್ನಾಲ್ಕು ಕಥೆಗಳನ್ನು ಅಡಕವಾಗಿಸುವ ಪಟ್ಟುಗಳನ್ನು ಸುನಿ ‘ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿ’ಯಲ್ಲೇ ಝಲಕ್ ತೋರಿಸಿದ್ದರು. ಅದಾದ ಬಳಿಕ ಆ ಬಗೆಯ ಪ್ರಯೋಗಗಳು ನಿರಂತರವಾದವು. ಇದೀಗ ಸುನಿ ಪ್ರಯತ್ನ ಮತ್ತೊಂದು ಬಗೆಯಲ್ಲಿ ಮುಂದುವರಿದಿದೆ. ಸಮುದ್ರ ಮಂಥನ, ವಾಸ್ಕೋಡಗಾಮ ಹಾಗೂ ಕರಾವಳಿಯ ಮಂಗಳ (ತುಳಸಿ) ‘ಪುರಾತನ’ ಕಥೆಗಳ ಜತೆಗೆ ‘ಆಧುನಿಕ’ಕತೆಯನ್ನು ಬೆರೆಸಿದ್ದಾರೆ. ಹೀಗಾಗಿ ಸಿನಿಮಾಕ್ಕೆ ‘ಗತವೈಭವ’ದ ಮೆರುಗು ತುಂಬಿಕೊಂಡಿದೆ.
ಪುರಾತನ ಎಂಬುದು ನಾಯಕ ದುಷ್ಯಂತ್ ಹೆಸರಾದರೆ, ಆಧುನಿಕ ಎಂಬುದು ನಾಯಕಿ ಆಶಿಕಾ ನಾಮಧ್ಯೇಯ. ಅಚ್ಚ ಕನ್ನಡದಲ್ಲೇ ಹೆಚ್ಚು ಕಡೆ ಉಸಿರಾಡಿರುವ ಈ ಸಿನಿಮಾದಲ್ಲಿ ಅದ್ಧೂರಿತನಕ್ಕೇನೂ ಕೊರತೆಯಿಲ್ಲ. ಕಥೆಯಲ್ಲಿ ಕೊಂಚ ‘ಎಳೆತ’ ಎಂದುಕೊಳ್ಳುವಷ್ಟರಲ್ಲೇ ಮತ್ತೊಂದು ದೃಶ್ಯವೈಭದ ‘ಸೆಳೆತ’ದೊಂದಿಗೆ ಸುನಿ ಹಾಜರಿ ಹಾಕುತ್ತಾರೆ. ಇದು ಅವರ ರುಜು ಇರುವ ಸಿನಿಮಾ. ಮೊದಲಾರ್ಧ ಎರಡು ಕಥೆಗಳನ್ನು ಒಪ್ಪಿಸಿ, ಮತ್ತೊಂದನ್ನು ದ್ವಿತೀಯಾರ್ಧಕ್ಕೆ ಉಳಿಸಿ ಕುತೂಹಲ ಕಾದಿಟ್ಟುಕೊಳ್ಳುತ್ತಾರೆ.
ಸೆಕೆಂಡ್ ಹಾಫ್‌ನಲ್ಲಿ ಕರಾವಳಿಯ ಸೊಗಡು ಮೈತುಂಬಿಕೊಂಡಿದೆ. ಹಾಗೆ ನೋಡಿದರೆ ಭಾವನಾತ್ಮಕವಾಗಿ, ಪ್ರೇಮಸಂಗಮದ ದೃಶ್ಯಗಳು ಈ ಭಾಗದಲ್ಲಿ ಗಮನ ಸೆಳೆಯುತ್ತವೆ. ಕಥೆಯ ಬೇರು ಮತ್ತು ಸತ್ವ ಹೆಚ್ಚು ಇರುವುದು ಕರಾವಳಿ ಭಾಗದ ಕಥೆಯಲ್ಲಿ.
ದುಷ್ಯಂತ್ ನಾನಾ ರೂಪದಲ್ಲಿ ಇಷ್ಟವಾಗುತ್ತಾರೆ. ಮೊದಲ ಚಿತ್ರದಲ್ಲೇ ಅನುಭವಿ ನಟರಂತೆ ಅಭಿನಯಿಸಿರುವುದು ಅವರ ಹೆಚ್ಚುಗಾರಿಕೆ. ಆಶಿಕಾ ರಂಗನಾಥ್ ದೇವಕನ್ನಿಕೆಯಾಗಿ, ಕರಾವಳಿ ಬೆಡಗಿಯಾಗಿ ಮನ ಸೆಳೆಯುವಲ್ಲಿ ಸಫಲರಾಗಿದ್ದಾರೆ. ಸುಧಾ ಬೆಳವಾಡಿ, ಕೃಷ್ಣ ಹೆಬ್ಬಾಳೆ, ಕೃಷ್ಣ ರಾವ್ ಹಾಗೂ ಕಿಶನ್ ಆಯಾ ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ವಿಲಿಯಂ ಡೇವಿಡ್ ಕ್ಯಾಮೆರಾ ಕುಸುರಿ ಚಿತ್ರಕ್ಕೆ ಮತ್ತಷ್ಟು ಮೆರುಗು ತುಂಬಿದೆ.


























