ನಿರ್ದೇಶನ: ಅನೀಶ್ ತೇಜೇಶ್ವರ್
ನಿರ್ಮಾಣ: ವಿಜಯ್ ರೆಡ್ಡಿ
ತಾರಾಗಣ: ಅನೀಶ್ ತೇಜೇಶ್ವರ್, ಸ್ವರೂಪಿಣಿ, ಜಾನ್ವಿಕಾ, ರಾಜೀವ್ ಕನಕಾಲ, ನಾಟ್ಯರಂಗ, ರವಿ ಭಟ್, ಪ್ರಮೋದಿನಿ, ತುಳಸಿ, ಚೇತನ್ ಮತ್ತಿತರರು.
ರೇಟಿಂಗ್-3.5
ಜಿ.ಆರ್.ಬಿ
ಒಲವಿಗೆ ನಾನಾ ರೂಪ. ಪ್ರೀತಿಯ ಹಿಂದೆ ಹೋದವರು… ಪ್ರೀತಿಯಲ್ಲೇ ಮುಳುಗಿದವರು, ‘ಪ್ರೀತಿ ನೀ ಇಲ್ಲದೇ ನಾನು ಹೇಗಿರಲಿ…’ ಎನ್ನುವವರು ಮತ್ತು ಪ್ರೀತಿಯ ಮತ್ತಿನಲ್ಲಿ ತೇಲಾಡುತ್ತಿರುವವರು… ಪ್ರೀತಿ ಎಂದರೆ ಮೂಗು ಮುರಿಯುವವರು, ಪ್ರೀತಿಯಲ್ಲಿ ಸೋತು ಸುಣ್ಣವಾದವರು, ಪ್ರೇಮ ವೈಫಲ್ಯಕ್ಕೆ ತುತ್ತಾದವರು… ಹೀಗೆ ಅನೇಕ ಮಾದರಿಯ ಜೋಡಿಗಳಿಗೆ, ಅಪರೂಪದ ಪ್ರೇಮಿಗಳಿಗೆ, ಪ್ರೀತಿ ಮಾಡ ಬಯಸುವವರಿಗೆ ‘ಲವ್ ಓಟಿಪಿ’ ಮೂಲಕ ಎರಡು ಬಗೆಯ ಪ್ರೇಮಕಥೆ ಒಪ್ಪಿಸಿದ್ದಾರೆ ನಿರ್ದೇಶಕ ಅನೀಶ್ ತೇಜೇಶ್ವರ್. ಅವರೇ ನಾಯಕ ನಟನಾಗಿಯೂ ಕಾಣಿಸಿಕೊಂಡಿರುವುದರಿಂದ ಕೆಲವು ನಟನಾ ಸ್ವಾತಂತ್ರ್ಯ ಹಾಗೂ ನಿರ್ದೇಶನದ ಸ್ವಾತಂತ್ರ್ಯವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.
ಇಡೀ ಸಿನಿಮಾವನ್ನು ಮನರಂಜನಾ ದೃಷ್ಟಿಕೋನದಲ್ಲೇ ಕಟ್ಟಿಕೊಟ್ಟಿದ್ದರೂ, ಅದರ ಜತೆಗೆ ಸೆಂಟಿಮೆಂಟ್, ಆಕ್ಷನ್, ಟ್ರ್ಯಾಜಿಡಿ… ಹೀಗೆ ಹಲವಾರು ಅಂಶಗಳನ್ನು ಬೆರೆಸಿ ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾವನ್ನಾಗಿಸುವಲ್ಲಿ ಅನೀಶ್ ಸಫಲರಾಗಿದ್ದಾರೆ. ಪ್ರೀತಿಯ ಆಳ-ಅಗಲವನ್ನು ಒಂದೇ ಸಿನಿಮಾದಲ್ಲಿ ತೆರೆದಿಟ್ಟಿದ್ದಾರೆ. ಜತೆಗೆ ಅಪ್ಪ-ಮಗನ ಬಾಂಧವ್ಯದ ಕಥೆಯೂ ಇದರಲ್ಲಿ ಅಡಕವಾಗಿದೆ.
ಕ್ರಿಕೆಟ್ ಎಂದರೆ ಪಂಚಪ್ರಾಣ. ಪ್ರೀತಿಗೂ ಅಷ್ಟೇ ಜಾಗ ಕೊಟಿರುವ ಅಕ್ಷಯ್ (ಅನೀಶ್) ಬಾಳಿನಲ್ಲಿ ಪ್ರೀತಿ ಹೇಗೆಲ್ಲ ‘ಆಟ’ ಆಡಿಸುತ್ತದೆ ಎಂಬುದು ಒಟ್ಟಾರೆ ಕಥೆ-ಚಿತ್ರಕಥೆ. ನಟನೆ, ನಿರ್ದೇಶನ ಎರಡರಲ್ಲೂ ಅನೀಶ್ ಸಿಕ್ಸರ್ ಭಾರಿಸಿದ್ದಾರೆ. ಸ್ವರೂಪಿಣಿ, ಜಾನ್ವಿಕಾ, ರಾಜೀವ್ ಕನಕಲಾ, ನಾಟ್ಯರಂಗ ಮುಂತಾದವರ ಅಭಿನಯ ಪಾತ್ರಕ್ಕೆ ಪೂರಕವಾಗಿದೆ.


























