ಡಿಸೆಂಬರ್ 25 ರಂದು ಎಲ್ಲೆಡೆ ಬಿಡುಗಡೆ
ಕಿಚ್ಚ ಸುದೀಪ್ ನಟಿಸಿರುವ ಮಾರ್ಕ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದು, ಬಿಡುಗಡೆಗೆ ಅಣಿಯಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್ ದೊರಕಿದ್ದು, ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ದಾಖಲೆ ಬರೆದಿದೆ. ಕಿಚ್ಚನ ಆ್ಯಕ್ಷನ್ ಖದರ್ ನೋಡಿ ಥ್ರಿಲ್ಲರ್ ಆಗಿರುವ ಸುದೀಪಿ ಅಭಿಮಾನಿಗಳಿಗೆ ಚಿತ್ರತಂಡ ಈಗ ಮತ್ತೊಂದು ಅಪ್‌ಡೇಟ್ ನೀಡಿದೆ.
ಮಾರ್ಕ್ ಸಿನಿಮಾಗೆ ಕುಂಬಳಕಾಯಿ ಪ್ರಾಪ್ತಿಯಾಗಿದ್ದು, ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಕೊನೆ ಹಂತದ ಚಿತ್ರೀಕರಣ ಮುಗಿಸಿ ಚಿತ್ರತಂಡ ಕುಂಬಳಕಾಯಿ ಒಡೆದಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ತೊಡಗಿಸಿಕೊಂಡಿದೆ. ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್ ಮತ್ತು ವಿಜಯ್ ಕಾರ್ತಿಕೇಯ ಜೋಡಿ ಜೋರಾಗಿಯೇ ಮೋಡಿ ಮಾಡಿತ್ತು. ಮತ್ತೆ ಅವರಿಬ್ಬರು `ಮಾರ್ಕ್’ ಮೂಲಕ ರಂಜಿಸಲು ಬರುತ್ತಿದ್ದಾರೆ.
ಮ್ಯಾಕ್ಸ್ ರೀತಿಯೇ ಈ ಬಾರಿಯೂ ಪೊಲೀಸ್ ಆಫೀಸರ್ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಿದ್ದಾರೆ. ಅಜಯ್ ಮಾರ್ಕಂಡೆ ಎಂಬ ಪಾತ್ರಕ್ಕೆ ಸುದೀಪ್ ಬಣ್ಣ ಹಚ್ಚಿದ್ದಾರೆ. ಡಿಸೆಂಬರ್ 25ರಂದು ಮಾರ್ಕ್ ಎಲ್ಲೆಡೆ ಬಿಡುಗಡೆಯಾಗಲಿದೆ. ಶೇಖರ್ ಚಂದ್ರ ಛಾಯಾಗ್ರಹಣವಿರುವ ಈ ಸಿನಿಮಾಕ್ಕೆ ಅಜನೀಶ್ ಬಿ ಲೋಕನಾಥ್ ಸಂಗೀತ ನೀಡಿದ್ದಾರೆ. ಸತ್ಯಜ್ಯೋತಿ ಫಿಲಂಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಡಿ ಮಾರ್ಕ್ ನಿರ್ಮಾಣವಾಗಿದೆ.


























