ದಾಂಡೇಲಿ : ದಾಂಡೇಲಿ ಅಂಬೇವಾಡಿ ಅಳ್ನಾವರ ಧಾರವಾಡ ರೈಲು ಸಂಚಾರ ಮುಂದಿನ ತಿಂಗಳು ಪ್ರಾರಂಭವಾಗಲಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಕಾರವಾರ ರೈಲ್ವೆ ನಿಲ್ದಾಣದಲ್ಲಿ ಅವರು ಶನಿವಾರ ಕಾರವಾರ ಮಾಧ್ಯಮಗಳ ಜೊತೆ ಮಾತನಾಡಿದರು. ದಾಂಡೇಲಿ ರೈಲು ಪುನಃ ಆರಂಭಕ್ಕೆ ಎಲ್ಲಾ ಸಿದ್ಧತೆ ಆಗಿವೆ ಎಂದರು.
ದಾಂಡೇಲಿಯಿಂದ ರೈಲು ಸಂಚಾರ ಆರಂಭಿಸಲು ಹಿರಿಯ ನಾಗರಿಕ ಫಿರೋಜ್ ಫೀರ್ಜಾದೆ ಅವರ ನೇತೃತ್ವದಲ್ಲಿ ಹೋರಾಟ ನಡೆದದ್ದು ಇಲ್ಲಿ ಸ್ಮರಣೀಯ. ಅಂಕೋಲಾ – ಹುಬ್ಬಳ್ಳಿ ರೈಲು ಮಾರ್ಗ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ ಎಂದು ಅವರು ಹೇಳಿದರು. ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಅರಂಭವಾದ ಅಂಕೋಲಾ ಹುಬ್ಬಳ್ಳಿ ರೈಲ್ವೆ ಮಾರ್ಗವನ್ನು ಪ್ರಧಾನಿ ಮೋದಿ ಕಾಲದಲ್ಲಿ ಪೂರ್ಣ ಮಾಡುತ್ತೇವೆ ಎಂದರು.
ಪರಿಸರವಾದಿಗಳು ಇನ್ನಾದರೂ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಮಾಡುವುದು ಬಿಡಬೇಕು ಎಂದ ಸಚಿವ ಸೋಮಣ್ಣ ಅವರು ಪರಿಸರವಾದಿಗಳು ಪ್ರೋತ್ಸಾಹಿಸಬೇಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದರು .ವನ್ಯಜೀವಿ ಮಂಡಳಿ ಮುಂದೆ ಇರುವ ಅಂಕೋಲಾ ಹುಬ್ಬಳ್ಳಿ ಮಾರ್ಗದ ಅನುಮತಿಯನ್ನು ಪಡೆಯುವಲ್ಲಿ ನಾವು ಯಶಸ್ವಿಯಾಗುವೆವು ಎಂದರು.
ಹುಬ್ಬಳ್ಳಿ ಅಂಕೋಲಾ ರೈಲ್ವೆ ಮಾರ್ಗ ನಿರ್ಮಾಣ ಕಾರ್ಯ1997-98 ರಲ್ಲಿ ಆರಂಭವಾಗಿದೆ. ಕೋರ್ಟಗೆ ಪ್ರಕರಣ ಹೋದ ಕಾರಣ ವಿಳಂಬವಾಗಿದೆ. ಈ ರೈಲು ಮಾರ್ಗ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಇದಕ್ಕಾಗಿ 2550 ಎಕರೆ ಭೂಮಿ ಬೇಕು. ರೈಲು ಮಾರ್ಗ ಹಾಗೂ ಚತುಷ್ಪಥ ರಸ್ತೆ ಜೊತೆಯಾಗಿ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಬಯಸಿದೆ.
ಈ ಮಾರ್ಗ ನಿರ್ಮಾಣಕ್ಕೆ ಬಹುತೇಕ ಒಪ್ಪಿಗೆ ಸಿಗುವ ಕಾಲ ಕೂಡಿ ಬಂದಿದೆ ಎಂದರು. ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆ ಮಂಡಳಿಯಲ್ಲಿ ವಿಲೀನ ಮಾಡಲು ಮಹಾರಾಷ್ಟ್ರ, ಕರ್ನಾಟಕದ ಕರಾವಳಿ ಕೊಂಕಣ ರೈಲ್ವೆ ನೌಕರರು, ಸಂಘಟನೆಗಳು ವಿರೋಧ ಮಾಡುತ್ತಿವೆ. ಈ ಬಗ್ಗೆ ಮಾತುಕತೆ ಮುಂದುವರಿದಿವೆ.
ಕೊಂಕಣ ರೈಲ್ವೆ ಮಾರ್ಗದಲ್ಲಿ ಸಹ ಅಭಿವೃದ್ಧಿ ಅಗಬೇಕು. ಮಾರ್ಗ ದ್ವಿಪಥವಾಗಬೇಕು .ನಿಲ್ದಾಣಗಳು ಅಧುನೀಕರಣ ಆಗಬೇಕು ಎಂಬುದು ನಮ್ಮ ಬಯಕೆ. ಮುರುಡೇಶ್ವರ, ಕುಮಟಾ, ಗೋಕರ್ಣ ರೈಲ್ವೆ ನಿಲ್ದಾಣಗಳ ಆಧುನಿಕರಣ ನಡೆದಿದರ ಎಂದು ಸಚಿವ ಸೋಮಣ್ಣ ಹೇಳಿದರು . ಕೊಂಕಣ ರೈಲ್ ಮಾರ್ಗ ಸುಧಾರಣೆಗೆ 330 ಕೋಟಿ ಮೀಸಲಿಡಲಾಗಿದೆ.
ಈ ಸುಧಾರಣೆ ಕಾರ್ಯಗಳು ಆರಂಭವಾಗಲಿವೆ ಎಂದರು. ಕರಾವಳಿಯಲ್ಲಿ ರೈಲ್ವೆ ಅಭಿವೃದ್ಧಿ ಯಿಂದ , ಹುಬ್ಬಳ್ಳಿ ಅಂಕೋಲಾ ರೈಲ್ವೆ ಮಾರ್ಗ ನಿರ್ಮಾಣದಿಂದ ಸಾವಿರಾರು ಉದ್ಯೋಗ ಸೃಷ್ಟಿಯಾಗಲಿವೆ. ಇದನ್ನು ಕೇಂದ್ರ ಸರಕಾರ ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕೆಲಸ ಮಾಡಲಿದೆ ಎಂದು ಕೇಂದ್ರದ ಸಚಿವ ವಿ.ಸೋಮಣ್ಣ ಹೇಳಿದರು.
ತಾಳಗುಪ್ಪ- ಶಿರಸಿ- ಹುಬ್ಬಳ್ಳಿ ರೈಲು ಮಾರ್ಗ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಮಾರ್ಗದ ಸರ್ವೆ ಕಾರ್ಯ ಭರದಿಂದ ನಡೆದಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು. ತಾಳಗುಪ್ಪ- ಶಿರಸಿ- ಹುಬ್ಬಳ್ಳಿ ರೈಲು ಮಾರ್ಗ ನಿರ್ಮಾಣಕ್ಕೆ ಫೈನಲ್ ಲೊಕೇಶನ್ ಸರ್ವೆಗೆ ಅನುಮೋದನೆಯನ್ನು ಕಳೆದ ಮಾರ್ಚ 2024 ರಲ್ಲೇ ನೀಡಲಾಗಿದೆ.
ಈ ಯೋಜನೆಗೆ 3115 ಕೋಟಿ ರೂ. ಮೀಸಲಿಡಲಾಗಿದೆ . ತಾಳಗುಪ್ಪ ಹೊನ್ನಾವರ ನಡುವೆ 95 ಕಿಮೀ ಉದ್ದದ ರೈಲ್ವೆ ಮಾರ್ಗದ ಸರ್ವೆ ಕಾರ್ಯ ನಡೆದಿದೆ. ತಾಳಗುಪ್ಪ ಹೊನ್ನಾವರ ಮಾರ್ಗದಲ್ಲಿ ನೂತನ ರೈಲು ಮಾರ್ಗ ನಿರ್ಮಾಣ ಖಚಿತ ಎಂದರು. ಕಾರವಾರ ರೈಲು ನಿಲ್ದಾಣ ಅಧಿಕಾರಿಗಳು, ರೈಲ್ವೆ ಇಲಾಖೆಯ ಉನ್ನತಾಧಿಕಾರಿ, ಪಿಆರ್ ಒ ಸುಧಾ ಕೃಷ್ಣಮೂರ್ತಿ ಇದ್ದರು.
