ಶಿವಮೊಗ್ಗ: ನಗರದಲ್ಲಿನ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯೊಬ್ಬರು ಅನಾರೋಗ್ಯದಿಂದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಚಿಕ್ಕಮಗಳೂರು ಮೂಲದ ಕೆ.ಪಿ. ಬಾಬು ಅಲಿಯಾಸ್ ಸಜಿ ಬಾಬು ಮೃತ ಕೈದಿ. ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬಾಬುನನ್ನು ನ. 10ರ ಬೆಳಗ್ಗೆ 5 ಗಂಟೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬುಧವಾರ ಬೆಳಗ್ಗೆ 5.40ರ ಸುಮಾರಿಗೆ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಕರಣವೊಂದರ ಸಂಬಂಧ ಚಿಕ್ಕಮಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಬಾಬುಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು. ಆಗಸ್ಟ್ 22ರಂದು ಬಾಬುನನ್ನು ಚಿಕ್ಕಮಗಳೂರು ಜಿಲ್ಲಾ ಕಾರಾಗೃಹದಿಂದ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿತ್ತು.


























