ಕೊಪ್ಪಳ: ಪಾಕಿಸ್ತಾನ ಟೆರರಿಸ್ಟ್ ಸ್ಟೇಟ್ ಎಂದು ಡಿಕ್ಲೇರ್ ಮಾಡಿಸುವ ಶಕ್ತಿ ಪ್ರಧಾನಿ ನರೇಂದ್ರ ಮೋದಿಗೆ ಇದೆಯಾ?, ಬರೀ ಮಾತನಾಡುತ್ತಾರೆ ಎಂದು ಸಿಎಂ ಆರ್ಥಿಕ ಸಲಹೆಗಾರ, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ದೆಹಲಿಯ ಬಾಂಬ್ ಬ್ಲಾಸ್ಟ್ ಕುರಿತು ಮಾತನಾಡಿದ ಅವರು, ದೆಹಲಿಯಲ್ಲಿ ನಡೆದ ಘಟನೆ ಅತ್ಯಂತ ಹೀನ, ಅಮಾನವೀಯ ಕೃತ್ಯ. ಉಮರ್‌ಅಬ್ದುಲ್ ವಿದ್ಯಾವಂತ, ಅವನು ಡಾಕ್ಟರ್. ಇಂತಹ ವ್ಯಕ್ತಿಗಳು ಹೀನ ಕೃತ್ಯ ಮಾಡುತ್ತಾರೆ ಎಂದರೆ ಅವರು ಮನುಷ್ಯರಲ್ಲ, ಬೀಯಿಂಗ್ ಎ ಡಾಕ್ಟರ್ ಆಗಿ ಇಂತಹ ಕೃತ್ಯ ಮಾಡುತ್ತಾರೆ ಎಂದರೆ ಅದು ಶೇಮ್ ಎಂದರು.
ಪಾಕಿಸ್ತಾನದಲ್ಲಿ ಆ್ಯಕ್ಟೀವ್ ಆಗಿರುವ ಜೈಶ್ ಎ ಮಹಮ್ಮದ್ ಸಂಘಟನೆ ಜೊತೆ ಲಿಂಕ್ ಇದೆ ಎಂದು ತಿಳಿದುಬಂದಿದೆ. ಕೇಂದ್ರ ಸರ್ಕಾರ, ಪ್ರಧಾನಿಗಳು ಬಾಂಬ್ ಬ್ಲಾಸ್ಟ್ ಆದಾಗ ಅವರನ್ನು ಬಿಡುವುದಿಲ್ಲ ಎಂದು ಮಾತಾಡುತ್ತಾರೆ. ಹತ್ತು ವರ್ಷದಿಂದ ಇದೇ ರೀತಿ ಮಾತನಾಡುತ್ತಿದ್ದಾರೆ. ಇದು ಹೊಸದಲ್ಲ. ನಮ್ಮ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡಾ ಘಟನೆ ಖಂಡಿಸಿದ್ದಾರೆ ಎಂದರು.
ದೆಹಲಿಯಲ್ಲಿ ಉಗ್ರ ಚಟುವಟಿಕೆ ನಡೆಯಬೇಕಾದರೆ ಪೊಲೀಸ್ ಇಂಟಲಿಜೆನ್ಸ್ ಇರುತ್ತದೆ. ದೆಹಲಿಯಲ್ಲಿ ರಾಜ್ಯ ಸರ್ಕಾರವೂ ಬಿಜೆಪಿ ಇದೆ. ಕೇಂದ್ರ ಸರ್ಕಾರದ ಇಂಟಲಿಜೆನ್ಸ್ ಅಟ್ಟರ್ ಫೆಲ್ಯೂವರ್ ಆಗಿದೆ. ಇಂಟಲಿಜೆನ್ಸ್ ಯಾತಕ್ಕೆ ಇರುತ್ತದೆ?. ಇಂಟಲಿಜೆನ್ಸ್‌ಗೆ ಇದನ್ನು ಕಂಡುಹಿಡಿಯೋಕೆ ಆಗಲ್ಲ ಎಂದರೆ ಆ ಡಿಪಾರ್ಟ್ಮೆಂಟ್ ತಗೆದುಹಾಕಿ ಎಂದು ಕಿಡಿಕಾರಿದರು.
ನೈತಿಕತೆ ಇದ್ದರೆ ರಾಜೀನಾಮೆ ಕೊಡಲಿ: ಕೇಂದ್ರ ಗೃಹ ಸಚಿವರಿಗೆ ನೈತಿಕತೆ ಇಲ್ಲ. ಇಲ್ಲಿನ ಬಿಜೆಪಿ ನಾಯಕರು ಸಣ್ಣ-ಸಣ್ಣ ವಿಷಯಕ್ಕೆ ರಾಜೀನಾಮೆ ಕೇಳುತ್ತಾರೆ. ಇವತ್ತು ಬಿಜೆಪಿ ವಿಪಕ್ಷ ನಾಯಕ ಆರ್. ಅಶೋಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಾಕೆ ರಾಜೀನಾಮೆ ಕೇಳಲ್ಲ?. ಅಮಿತ್ ಶಾಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕು. ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಕ್ಷಮೆ ಕೇಳಬೇಕು. ನೀವು ಎಲ್ಲಿ ಹುಡುಕಿ ಹೊಡಿಯುತ್ತೀರಿ?. ದೇಶದ ಜನ ಕ್ಷಮಿಸುವುದಿಲ್ಲ. ಪ್ರಧಾನಮಂತ್ರಿ ವಿಫಲವಾಗಿದ್ದಾರೆ. 12 ಜನ ಸತ್ತಿದ್ದಾರೆ. ಇನ್ನೂ ಎಷ್ಟು ಜನ ಸಾಯ್ತಾರೋ ಗೊತ್ತಿಲ್ಲ ಎಂದರು.


























