ಹುಬ್ಬಳ್ಳಿ: ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿದ್ದ ಬೆಂಗಳೂರು – ಬೆಳಗಾವಿ ವಂದೇ ಭಾರತ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಚಾಲನೆ ನೀಡಿದ್ದು, ಬೆಳಗಾವಿಯಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಂದ ಮೊದಲ ದಿನವೇ ಉತ್ತಮ ಸ್ಪಂದನೆ ಲಭಿಸಿದೆ.
ಒಟ್ಟು 8 ಬೋಗಿಗಳನ್ನು ಹೊಂದಿರುವ ಈ ರೈಲಿನಲ್ಲಿ ಎಸಿ ಕಾರ್ ಚೇರ್ – 478, ಎಕ್ಸಿಕ್ಯುಟಿವ್ ಸೀಟ್ 52 ಇವೆ. ಮೊದಲ ದಿನ ಒಟ್ಟು 185 ಪ್ರಯಾಣಿಕರು ಎಸಿ ಕಾರ್ ಚೇರ್‌ನಲ್ಲಿ, 26 ಪ್ರಯಾಣಿಕರು ಎಕ್ಸಿಕ್ಯೂಟಿವ್ ಸೀಟ್‌ನಲ್ಲಿ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ ಎಂದು ನೈಋತ್ಯ ರೈಲ್ವೆ ಮೂಲಗಳು ತಿಳಿಸಿವೆ.
ಮೊದಲ ದಿನವೇ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಲಭಿಸಿದ್ದು, ಸೋಮವಾರ ಪ್ರಯಾಣಿಸಿದ ಪ್ರಯಾಣಿಕರಲ್ಲಿ ಬಹುತೇಕರು ಹುಬ್ಬಳ್ಳಿಯಿಂದ ಪ್ರಯಾಣಿಸಿದವರೆ ಹೆಚ್ಚು. ಇನ್ನು ನಾಲ್ಕಾರು ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಆಗಲಿದೆ ಎಂದು ಮೂಲಗಳು ತಿಳಿಸಿವೆ.
ಬೆಳಿಗ್ಗೆ 5.20ಕ್ಕೆ ಬೆಳಗಾವಿಯಿಂದ ಹೊರಡುವ ಈ ವಂದೇ ಭಾರತ ರೈಲು ಧಾರವಾಡಕ್ಕೆ 7.08 ಬರಲಿದೆ. 7.10 ಕ್ಕೆ ಧಾರವಾಡದಂದ ಹೊರಟು ಹುಬ್ಬಳ್ಳಿಗೆ 7.30ಕ್ಕೆ ಆಗಮಿಸಲಿದೆ. ಹುಬ್ಬಳ್ಳಿಯಿಂದ 7.35ಕ್ಕೆ ಹೊರಟು ಹಾವೇರಿಗೆ 8.35ಕ್ಕೆ ತಲುಪಲಿದೆ. 8.37 ಕ್ಕೆ ಹಾವೇರಿಯಿಂದ ಹೊರಟು 9.25ಕ್ಕೆ ದಾವಣಗೆರೆ ತಲುಪಲಿದೆ. 9.27 ಕ್ಕೆ ದಾವಣಗೆರೆಯಿಂದ ಹೊರಟು 12.15 ಕ್ಕೆ ತುಮಕೂರು ತಲುಪಲಿದೆ. 12.17 ಕ್ಕೆ ತುಮಕೂರಿನಿಂದ ಹೊರಟು 1.03ಕ್ಕೆ ಯಶವಂತಪುರ ತಲುಪಲಿದ್ದು, ಅಲ್ಲಿಂದ 1.05ಕ್ಕೆ ಹೊರಟು 1.50ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ತಲುಪಲಿದೆ.
ಬೆಳಿಗ್ಗೆ 7 ಗಂಟೆಗೆ ಧಾರವಾಡದಿಂದ ಬೆಂಗಳೂರಿಗೆ ಹೊರಡುವವರಿಗೆ, ಬೆಳಿಗ್ಗೆ 7.30ಕ್ಕೆ ಹುಬ್ಬಳ್ಳಿಯಿಂದ ಹೊರಡುವವರಿಗೆ ಈ ವಂದೇ ಭಾರತ ರೈಲು ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.
ಕುಂದಾನಗರ ಎಕ್ಸ್‌ಪ್ರೆಸ್‌ಗೆ ಪೇಢಾನಗರದಲ್ಲಿ ಸ್ವಾಗತ: ಧಾರವಾಡ: ಬೆಂಗಳೂರು-ಬೆಳಗಾವಿ ವಂದೇಭಾರತ ಎಕ್ಸ್‌ಪ್ರೆಸ್ ರೈಲಿಗೆ ಭಾನುವಾರ ಸಂಜೆ ಧಾರವಾಡ ರೈಲು ನಿಲ್ದಾಣದಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಮಹಾಪೌರ ಜ್ಯೋತಿ ಪಾಟೀಲ, ಪಾಲಿಕೆ ಸದಸ್ಯರಾದ ವಿಷ್ಣು ಕೊರ್ಲಹಳ್ಳಿ ಸೇರಿದಂತೆ ನೂರಾರು ನಾಗರಿಕರು ಸ್ವದೇಶಿ ನಿರ್ಮಿತ, ಸೆಮಿ-ಹೈ ಸ್ಪೀಡ್ ಸ್ವಯಂ ಚಾಲಿತ ರೈಲನ್ನು ಬರಮಾಡಿಕೊಂಡರು. ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ಸಂಭ್ರಮಿಸುತ್ತ ರೈಲಿನ ಪ್ರಯಾಣಿಕರಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಹಾಪೌರ ಜ್ಯೋತಿ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಕಾರ್ಯಾರಂಭ ಮಾಡಿದ 11ನೇ ವಂದೇ ಭಾರತ ಎಕ್ಸ್‌ಪ್ರೆಸ್ ರೈಲು ಇದಾಗಿದ್ದು, ಇದು ವೇಗ, ಸೌಕರ್ಯ ಹಾಗೂ ಆರ್ಥಿಕ ಪ್ರಗತಿಯ ಹೊಸ ಆಯಾಮಗಳನ್ನು ತೆರೆಯುವ ಸಾಧನವಾಗಿದೆ. ಇದು 8 ಚೇರ್ ಕಾರ್ ಹೊಂದಿದ್ದು, 530 ಆಸನಗಳ ಸಾಮರ್ಥ್ಯ ಹೊಂದಿದೆ. ಬೆಂಗಳೂರು-ಬೆಳಗಾವಿ ಮಧ್ಯದ 611 ಕಿ.ಮೀ. ದೂರವನ್ನು 8.5 ಗಂಟೆಗಳಲ್ಲಿ ಕ್ರಮಿಸಲಿದೆ. ಇದರಿಂದ ವೃತ್ತಿಪರರು, ವಿದ್ಯಾರ್ಥಿಗಳು ಹಾಗೂ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ ಎಂದರು.