ದಾವಣಗೆರೆ: ಬಾಪೂಜಿ ವಿದ್ಯಾಸಂಸ್ಥೆಯಿಂದ ನಗರದಲ್ಲಿ ಕೃಷಿ ಮತ್ತು ತೋಟಗಾರಿಕಾ ಕಾಲೇಜು ಆರಂಭ ಮಾಡಲಾಗುತ್ತಿದ್ದು, ನಮ್ಮ ಭಾಗದ ರೈತರಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದು ಜಿಲ್ಲಾ ಉಸ್ತುವಾತಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಕೃಷಿ ಮತ್ತು ತೋಟಗಾರಿಕಾ ಕಾಲೇಜು ಆರಂಭಕ್ಕೆ ಅ.31ರ ಶುಕ್ರವಾರದಂದು ಪರವಾನಿಗೆ ದೊರೆತಿದೆ. ಇದರಿಂದ ಕೃಷಿಯಲ್ಲಿ ಸಂಶೋಧನೆ ನಡೆಸಲು ನಮ್ಮ ಭಾಗದ ರೈತರಿಗೂ ಅನುಕೂಲವಾಗಲಿದೆ ಎಂದರು.
ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯದ ಸಂಯೋಜನೆಯಡಿಯಲ್ಲಿ ಬಾಪೂಜಿ ವಿದ್ಯಾಸಂಸ್ಥೆಯಿಂದ ಎಸ್‌ಎಸ್ ಇನ್ಸಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಅಂಡ್ ಹಾರ್ಟಿಕಲ್ಚರಲ್ ಸೈನ್ಸ್ ಕಾಲೇಜು ಆರಂಭಿಸಲಾಗುತ್ತಿದೆ. ರೈತರ ಮಕ್ಕಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಕೃಷಿಗೆ ಸಾಕಷ್ಟು ಸ್ಕೋಪ್ ಇದೆ. ಆರ್ಥಿಕತೆಯೂ ಅಭಿವೃದ್ಧಿಯಾಗಲಿದೆ ಒಳ್ಳೆಯ ಕಾಲೇಜಾಗುತ್ತದೆ ಎಂಬ ಭರವಸೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕುಲಸಚಿವ ಬಕ್ಕಪ್ಪ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 10 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ನಡೆಯುತ್ತಿದೆ. ಶೈಕ್ಷಣಿಕ ಮತ್ತು ತಾಂತ್ರಿಕವಾಗಿ ಹೆಚ್ಚು ಫಲಪ್ರದವಾಗಿ ಮಾಡಲು ಕೃಷಿಗೆ ಪ್ರತ್ಯೇಕವಾಗಿ ಒಂದು ಸಂಸ್ಥೆಯ ಅಗತ್ಯವಿತ್ತು. ಸರ್ಕಾರದಿಂದ ಖಾಸಗಿ ಸಂಸ್ಥೆಗಳಿಗೆ ಕೃಷಿ ಕಾಲೇಜು ಮಾಡಲು ಅವಕಾಶವಿರಲಿಲ್ಲ. ಪ್ರಥಮ ಬಾರಿಗೆ ಈ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಈ ಕಾಲೇಜಿಂದ ಜಿಲ್ಲೆಯ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.
ನಾಲ್ಕು ವರ್ಷದ ಅವಧಿಯಲ್ಲಿ ವಿದ್ಯಾರ್ಥಿಗಳು ಕೃಷಿ ಪದವಿ ಪಡೆದು ಹೊರಬರುತ್ತಾರೆ. ಇದಕ್ಕಾಗಿ ಮೀಸಲಿಟ್ಟಿರುವ 83 ಎಕರೆ ಜಮೀನಿನಲ್ಲಿ ಕೃಷಿ ಚಟುವಟಿಕೆಗಳ ಪ್ರಯೋಗಕ್ಕೆ ಪ್ರತಿಯೊಬ್ಬ ವಿದ್ಯಾರ್ಥಿಗೆ ಅರ್ಧ ಎಕರೆ ಭೂಮಿ ನೀಡಲಾಗುತ್ತದೆ. ಶೇ.60ರಷ್ಟು ಸಿಇಟಿ ಮೂಲಕ ಆಯ್ಕೆ ಮತ್ತು 40 ರಷ್ಟು ಮ್ಯಾನೇಜ್ಮೆಂಟ್ ಕೋಟಾದಲ್ಲಿ ನೀಡಲಾಗುತ್ತದೆ. ಸಿಇಟಿ ಮೂಲಕ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ 60,500 ರೂ., ಶುಲ್ಕವಿರುತ್ತದೆ ರೈತರ ಮಕ್ಕಳಿಗೆ ಶೇ.50ರಷ್ಟು ಸೀಟಿನ ಮೀಸಲಾತಿ ನೀಡಲಾಗುತ್ತದೆ ಎಂದು ಹೇಳಿದರು.
ಸಿಎಂ ಬದಲಾವಣೆ ಬಗ್ಗೆ ಗೊತ್ತಿಲ್ಲ: ಈಗ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಿದ್ದು, ಬದಲಾವಣೆ ಮಾಡುವುದು ಬಿಡುವುದು ಹೈಕಮಾಂಡ್‌ಗೆ ಬಿಟ್ಟವಿಚಾರ, ಸಿಎಂ ಬದಲಾವಣೆ ಮತ್ತು ಸಚಿವ ಸಂಪುಟದ ಪುರ‍್ರಚನೆ ಬಗ್ಗೆ ನನಗೇನೂ ಗೊತ್ತಿಲ್ಲ, ಎಲ್ಲರಿಗೂ ಸಚಿವ ಸ್ಥಾನ ಸಿಗಬೇಕೆಂಬ ಆಶಯವಿರುತ್ತದೆ.
ಆಕಾಶ ನೋಡೋಕೆ ನೂಕು ನುಗ್ಗಲ್ಯಾಕೆ ಎಂದು ಮಾರ್ಮಿಕವಾಗಿ ನುಡಿದ ಅವರು, ತಮಗೆ ಡಿಸಿಎಂ ಸ್ಥಾನ ನೀಡಬೇಕೆಂಬುದು ಅಭಿಮಾನಿಗಳ ಒತ್ತಾಸೆ, ಆ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸದೆ ಪ್ರಭಾ ಮಲ್ಲಿಕಾರ್ಜುನ್, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಸೇರಿದಂತೆ ಅಧಿಕಾರಿ ವರ್ಗದವರು ಹಾಜರಿದ್ದರು.
























