ಮಂಗಳೂರು: ಕಂಬಳ ಕರೆಯ ಅಡ್ಡಹಲಗೆ ವಿಭಾಗದ ಚಾಂಪಿಯನ್, ಸುಮಾರು 150ಕ್ಕೂ ಅಧಿಕ ಪದಕ ಪಡೆದ “ಬೋಳಾರ ಕುಟ್ಟಿ’ ಕೋಣ ಶುಕ್ರವಾರ ರಾತ್ರಿ ನಿಧನ ಹೊಂದಿದೆ.
ಅಡ್ಡ ಹಲಗೆ ಹಾಗೂ ಕನೆಹಲಗೆ ವಿಭಾಗದಲ್ಲಿ ಕುಟ್ಟಿ ಅಭೂತಪೂರ್ವ ಸಾಧನೆ ಮೂಲಕ ಗಮನ ಸೆಳೆದಿತ್ತು. ಸುರತ್ಕಲ್ ಸರ್ವೋತ್ತಮ ಮಾಧವ ಪ್ರಭು ಅವರಲ್ಲಿದ್ದ ಕುಟ್ಟಿ 92 ಪದಕವನ್ನು ಪಡೆದಿತ್ತು. ಬಳಿಕ 2019ರಲ್ಲಿ ಬೋಳಾರ ತ್ರಿಶಾಲ್ ಕೆ. ಪೂಜಾರಿ ಅವರು ಕುಟ್ಟಿಯನ್ನು ಖರೀದಿಸಿದ್ದರು. ಮಿಂಚಿನ ಓಟದೊಂದಿಗೆ ಅಡ್ಡಹಲಗೆ ವಿಭಾಗದಲ್ಲಿ ಕುಟ್ಟಿ ಚಾಂಪಿಯನ್ ಸ್ಥಾನ ಪಡೆದಿತ್ತು.
ಕನೆಹಲಗೆ ವಿಭಾಗದಲ್ಲಿ ಕುಟ್ಟಿಯು ನಿಶಾನೆಗೆ ನೀರು ಚಿಮ್ಮಿಸುವ ಮೂಲಕ ಹಲವು ಬಾರಿ ಪದಕ ಪಡೆದಿತ್ತು. ಅಡ್ಡ ಹಲಗೆ ಹಾಗೂ ಕನೆ ಹಲಗೆ ವಿಭಾಗದಲ್ಲಿ ತ್ರಿಶಾಲ್ ಕೆ. ಪೂಜಾರಿ ಅವರಿಗೆ 50ಕ್ಕೂ ಮಿಕ್ಕಿ ಪದಕಗಳನ್ನು ದೊರಕಿಸಿಕೊಟ್ಟ ಕುಟ್ಟಿ ಒಟ್ಟು 150ಕ್ಕೂ ಮೀರಿ ಪದಕಗಳನ್ನು ತನ್ನದಾಗಿಸಿದೆ. ಅಡ್ಡಹಲಗೆಯ ವಿಭಾಗದಲ್ಲಿ ಕುಟ್ಟಿ ಚಾಂಪಿಯನ್ ಗೌರವವನ್ನೂ ಪಡೆದಿತ್ತು.
