ಸಾಲುಮರದ ತಿಮ್ಮಕ್ಕ ಪ್ರಕೃತಿಯಲ್ಲಿ ಲೀನ

0
74

ಬೆಂಗಳೂರು: ಪ್ರಕೃತಿಯ ಮಾತೃಸ್ವರೂಪಿಯಾಗಿ ದೇಶಾದ್ಯಂತ ಹೆಸರಾಗಿದ್ದ, ಪದ್ಮಶ್ರೀ ಪುರಸ್ಕೃತರು, ಪರಿಸರ ಸ್ನೇಹಿ ನಿಸರ್ಗತಾಯಿ ಸಾಲುಮರದ ತಿಮ್ಮಕ್ಕ (114) ಇಂದು ಮಧ್ಯಾಹ್ನ ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಉಸಿರಾಟ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದ ತಿಮ್ಮಕ್ಕ ಅವರನ್ನು ಬೆಂಗಳೂರಿನ ಜಯನಗರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಅನನ್ಯ ಜೀವನ – ಅಸಾಮಾನ್ಯ ಸೇವೆ: 1911ರ ಜೂನ್ 30 ರಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಹುಲಿಕಲ್ ಗ್ರಾಮದಲ್ಲಿ ಜನಿಸಿದ್ದ ತಿಮ್ಮಕ್ಕ, ಬಡ ಕುಟುಂಬದಲ್ಲಿ ಬೆಳೆದರೂ ಮಾನವೀಯತೆ ಮತ್ತು ಪರಿಸರದ ಒಲವು ಅವರ ಜೀವನದ ಮೂಲ ಇದ್ದಿತು.
ಚಿಕ್ಕಯ್ಯರನ್ನು ವಿವಾಹವಾದ ನಂತರ, ದಂಪತಿಗೆ ಮಕ್ಕಳು ಆಗಲಿಲ್ಲ. ಈ ನೋವನ್ನು ಹಸನಾದ ನಿಸರ್ಗಕ್ಕೆ ತಿರುಗಿಸಿದ ತಿಮ್ಮಕ್ಕ ಮಕ್ಕಳಿಲ್ಲದ ನೋವನ್ನು ಮರೆಯಲು ರಸ್ತೆಯ ಬದಿಯಲ್ಲಿ ಅಲದ ಸಸಿಗಳನ್ನು ನೆಟ್ಟು ಬೆಳೆಸುವ ಕಾರ್ಯ ಆರಂಭಿಸಿದ್ದರು.

384 ಆಲದ ಮರಗಳ ಅಮ್ಮ – ‘ಸಾಲುಮರದ’ ತಿಮ್ಮಕ್ಕ: ತಿಮ್ಮಕ್ಕ ಅವರು ತಮ್ಮ ಪತಿ ಚಿಕ್ಕಯ್ಯರೊಂದಿಗೆ 384 ಆಲದ ಸಸಿಗಳನ್ನು ನೆಟ್ಟು ಅವುಗಳನ್ನು ಮಕ್ಕಳಂತೆ ನೋಡಿಕೊಂಡರು. ಜಲ, ಗೊಬ್ಬರ, ಬೇಲಿ—ಎಲ್ಲವನ್ನೂ ತಮ್ಮ ಕೈಗಳಿಂದಲೇ ಮಾಡಿದ್ದಾರೆ. ಈ ಸಾಲಿನ ಆಲದ ಮರಗಳೇ ಅವರಿಗೆ “ಸಾಲುಮರದ ತಿಮ್ಮಕ್ಕ” ಎಂಬ ಅಮರ ಹೆಸರನ್ನು ತಂದವು.

ರಾಷ್ಟ್ರದ ಗೌರವ: ತಮ್ಮ ಆದರ್ಶ ಸೇವೆಗೆ 2019ರಲ್ಲಿ ಭಾರತ ಸರ್ಕಾರದಿಂದ ರಾಷ್ಟ್ರದ ನಾಲ್ಕನೇ ಅತ್ಯುನ್ನತ ಪೌರ ಪುರಸ್ಕಾರ ಪದ್ಮಶ್ರೀ ನೀಡಿ ಗೌರವಿಸಲಾಯಿತು. ತಿಮ್ಮಕ್ಕ ಅವರ ಸಾಧನೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದೆ.

ನಿಸರ್ಗ ಸೇವೆಗೆ ಜೀವವನ್ನೇ ಅರ್ಪಿಸಿದ ಮಹಿಳೆ: ವಯಸ್ಸಿನ ಸಂಧಿಭಾಗದಲ್ಲೂ ಅವರು ನಿಸರ್ಗ ಸಂರಕ್ಷಣೆ, ಗಿಡ ನೆಡುವಿಕೆ, ಪರಿಸರ ಜಾಗೃತಿ ಕುರಿತು ಜನರಿಗೆ ಪ್ರೇರಣೆ ನೀಡುತ್ತಿದ್ದರು. ತಿಮ್ಮಕ್ಕ ಅವರ ಜೀವಿತವು “ಮನುಷ್ಯ ಪ್ರಕೃತಿಗೆ ಏನು ಕೊಡಬಹುದು?” ಎಂಬ ಪ್ರಶ್ನೆಗೆ ಉತ್ತರವಾಗಿದೆ.

ರಾಜ್ಯ-ರಾಷ್ಟ್ರದಲ್ಲಿ ಶೋಕ: ತಿಮ್ಮಕ್ಕ ನಿಧನಕ್ಕೆ ಪರಿಸರ ಪ್ರೇಮಿಗಳು, ರಾಜಕೀಯ ನಾಯಕರು, ವಿಜ್ಞಾನಿಗಳು, ಸಾಮಾನ್ಯ ಜನರು ದುಃಖ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವದೊಂದಿಗೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

Previous articleಜಂಗಲ್ ರಾಜ್ ಧಿಕ್ಕರಿಸಿ ಮಂಗಲ್ ರಾಜ್‌ಗೆ ಬಿಹಾರಿಗಳ ಆಶೀರ್ವಾದ
Next articleಅಲಿನಗರ: ಮೈಥಿಲಿ ಠಾಕೂರ್ ಐತಿಹಾಸಿಕ ಮುನ್ನಡೆ

LEAVE A REPLY

Please enter your comment!
Please enter your name here