ಗುಂಡೇಟಿನಿಂದ ಮೃತಪಟ್ಟ ರಾಜಶೇಖರ ಮನೆಗೆ ಬಿಜೆಪಿ ನಾಯಕರ ಭೇಟಿ

0
17

ರಾಜಶೇಖರ ಕುಟುಂಬಕ್ಕೆ ₹10 ಲಕ್ಷ ಪರಿಹಾರ ವಿತರಣೆ – ಸಿಬಿಐ ತನಿಖೆಗೆ ಒತ್ತಾಯ

ಬಳ್ಳಾರಿ: ಇತ್ತೀಚೆಗೆ ನಡೆದ ಗುಂಡೇಟು ಪ್ರಕರಣದಲ್ಲಿ ಸಾವನ್ನಪ್ಪಿದ ರಾಜಶೇಖರ ಅವರ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಿರಿಯ ಬಿಜೆಪಿ ನಾಯಕರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಬಿಜೆಪಿ ಪಕ್ಷದ ವತಿಯಿಂದ ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರದ ಚೆಕ್ ವಿತರಿಸಲಾಯಿತು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, “ಇದು ಸ್ಪಷ್ಟವಾದ ಕೊಲೆ. ಕಾಂಗ್ರೆಸ್ ಪಕ್ಷದವರೇ ಗುಂಡು ಹಾರಿಸಿ ರಾಜಶೇಖರ ಅವರನ್ನು ಕೊಂದಿದ್ದಾರೆ. ಈ ಕುಟುಂಬ ಬಡತನದಲ್ಲಿದ್ದು, ನಾವು ಎಲ್ಲರೂ ಅವರ ನೋವಿಗೆ ಸ್ಪಂದಿಸಲು ಬಂದಿದ್ದೇವೆ. ಹಣದಿಂದ ನ್ಯಾಯ ಸಿಗುವುದಿಲ್ಲ. ಆದರೆ ಕುಟುಂಬದ ಕನಿಷ್ಠ ಬದುಕಿಗೆ ಇದು ಸಹಾಯವಾಗಲಿ ಎಂಬ ಉದ್ದೇಶದಿಂದ ಪರಿಹಾರ ನೀಡಲಾಗಿದೆ” ಎಂದು ಹೇಳಿದರು.

ಇದನ್ನೂ ಓದಿ:  ರಸ್ತೆ ಅಪಘಾತ: ಮಾಜಿ ಸಚಿವ ರಾಜೂಗೌಡ ಪ್ರಾಣಾಪಾಯದಿಂದ ಪಾರು

ಮುಖ್ಯಮಂತ್ರಿಗಳು ಈ ವಿಚಾರವನ್ನು ತಮಾಷೆಯಂತೆ ನೋಡದೇ ಗಂಭೀರವಾಗಿ ಪರಿಗಣಿಸಬೇಕು. ಪ್ರಕರಣದ ಸತ್ಯ ಹೊರಬರಬೇಕಾದರೆ ಇದನ್ನು ಸಿಬಿಐ ತನಿಖೆಗೆ ಒಪ್ಪಿಸಲೇಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು.

ಆರಂಭದಲ್ಲಿ ಗೊಂದಲ, ಸತ್ಯ ಬಹಿರಂಗವಾಗಿದೆ – ಶ್ರೀರಾಮುಲು: ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಬಿಜೆಪಿ ನಾಯಕ ಬಿ. ಶ್ರೀರಾಮುಲು, “ರಾಜಶೇಖರ ಸಾವಿನ ವಿಚಾರದಲ್ಲಿ ಆರಂಭದಲ್ಲಿ ಸಾಕಷ್ಟು ಗೊಂದಲ ಇತ್ತು. ಬಿಜೆಪಿ ಕಾರ್ಯಕರ್ತರೇ ಕೊಲೆ ಮಾಡಿದ್ದಾರೆ ಎಂದು ತಪ್ಪು ಆರೋಪ ಮಾಡಲಾಯಿತು. ಆದರೆ ನಂತರ ಕಾಂಗ್ರೆಸ್ ಕಡೆಯಿಂದಲೇ ಈ ಕೊಲೆ ನಡೆದಿರುವುದು ಸ್ಪಷ್ಟವಾಗಿದೆ” ಎಂದು ಹೇಳಿದರು.

ಇದನ್ನೂ ಓದಿ:  ಕಾಂಗ್ರೆಸ್ ಆಡಳಿತ ಬಂದ ಬಳಿಕ ರಾಜ್ಯವೇ ಉರಿಯುವ ಮನೆಯಾಗಿದೆ

ಮೃತ ರಾಜಶೇಖರ ಅವರ ತಾಯಿಗೆ ನಿಜಾಂಶವನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ನಮ್ಮಿಂದ ಯಾವುದೇ ತಪ್ಪಾಗಿಲ್ಲ ಎಂಬುದನ್ನು ಅವರಿಗೆ ತಿಳಿಸಿದ್ದೇವೆ. ಸಾವು ಸಂಭವಿಸಿದ ದಿನವೇ ನಾವು ಬರಬೇಕಿತ್ತು. ಆದರೆ ಪರಿಸ್ಥಿತಿಯಿಂದ ಆಗಲಿಲ್ಲ. ಅದಕ್ಕಾಗಿಯೇ ಇಂದು ಮನೆಗೆ ಬಂದು ಕುಟುಂಬಸ್ಥರನ್ನು ಭೇಟಿಯಾಗಿ ₹10 ಲಕ್ಷ ಪರಿಹಾರದ ಚೆಕ್ ನೀಡಿದ್ದೇವೆ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ, ವಿಧಾನಪರಿಷತ್ ವಿಪಕ್ಷ ನಾಯಕ ಛಲುವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಸೇರಿದಂತೆ ಹಲವು ಬಿಜೆಪಿ ನಾಯಕರು ಉಪಸ್ಥಿತರಿದ್ದರು. ಬಿಜೆಪಿ ನಾಯಕರು ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸುವವರೆಗೆ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.

Previous articleಕಾಂಗ್ರೆಸ್ ಆಡಳಿತ ಬಂದ ಬಳಿಕ ರಾಜ್ಯವೇ ಉರಿಯುವ ಮನೆಯಾಗಿದೆ