ಇಳಕಲ್: ಇಲ್ಲಿನ ಎರಡು ಉರ್ದು ಪ್ರಾಥಮಿಕ ಶಾಲೆಗಳು ವಿಭಿನ್ನ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿವೆ. ಒಂದು ಶಾಲೆಯಲ್ಲಿ ಶಿಕ್ಷಕರು ಇದ್ದರೆ ವಿದ್ಯಾರ್ಥಿಗಳೇ ಇಲ್ಲ. ಇನ್ನೊಂದೆಡೆ ವಿದ್ಯಾರ್ಥಿಗಳು ತುಂಬಿದ್ದಾರೆ, ಶಿಕ್ಷಕರ ಕೊರತೆ ಇದೆ.
ಇಲ್ಲಿನ ಬಸವೇಶ್ವರ ಸರ್ಕಲ್ ಬಳಿ ಇರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಸ್ಟಾಫ್ ಕಾಲೋನಿಯಲ್ಲಿ ಸರಕಾರಿ ಉರ್ದು ಪ್ರಾಥಮಿಕ ಶಾಲೆ ನಂ. 5 ಇದೆ. ಅಲ್ಲಿ ಮೂವರು ಶಿಕ್ಷಕರು ಇದ್ದಾರೆ. ಜತೆಗೆ ಅನ್ನಪೂರ್ಣ ಅಡುಗೆಮನೆಯ ಸಿಬ್ಬಂದಿ ವರ್ಗದವರೂ ಇದ್ದಾರೆ. ಆದರೆ ನಾಲ್ಕನೆಯ ತರಗತಿಗೆ ಒಬ್ಬನೇ ಒಬ್ಬ ವಿದ್ಯಾರ್ಥಿ ಇದ್ದು ಅವನು ತನಗೆ ತಿಳಿದಾಗ ಶಾಲೆಗೆ ಬರುತ್ತಾನೆ.
ಆ ಒಬ್ಬನಿಗಾಗಿ ಮೂವರು ಶಿಕ್ಷಕರು ಕಾಯ್ದು ಕುಳಿತಿರಬೇಕಾಗಿದೆ. ಬಿಸಿಯೂಟದವರು ಸಹ ಆ ವಿದ್ಯಾರ್ಥಿ ಬರುತ್ತಾನೋ ಇಲ್ಲವೋ ಎಂದು ಅಡುಗೆ ಮಾಡಲು ಹಿಂದೇಟು ಹಾಕುವಂತಾಗಿದೆ. ಹುಡುಗ ಬಂದರೆ ತಮ್ಮದೇ ಬುತ್ತಿಯನ್ನು ಅವನಿಗೆ ಕೊಡುತ್ತಿದ್ದಾರೆ.
ಇದಕ್ಕೆ ತದ್ವಿರುದ್ಧ ಅಲಂಪೂರಪೇಟೆಯಲ್ಲಿ ಇರುವ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ. ಇದರಲ್ಲಿ 157 ವಿದ್ಯಾರ್ಥಿಗಳು ಒಂದರಿಂದ ಏಳನೆಯ ವರ್ಗದವರೆಗೆ ಕಲಿಯುತ್ತಿದ್ದಾರೆ.
ಆಗಸ್ಟ್ ತಿಂಗಳಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಇಬ್ಬರು ಶಿಕ್ಷಕರಲ್ಲಿ ನಡೆದ ವಾಗ್ವಾದ ಅತಿರೇಕಕ್ಕೆ ಹೋಗಿದ್ದು ಆ ಇಬ್ಬರೂ ಶಿಕ್ಷಕರನ್ನು ಬಾಗಲಕೋಟೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಅಮಾನತುಗೊಳಿಸಿದ್ದಾರೆ.
ಹೀಗಾಗಿ ಅಲ್ಲಿ ಆರು ಶಿಕ್ಷಕರಿದ್ದದ್ದು ನಾಲ್ಕಕ್ಕೆ ಇಳಿದಿದೆ. ಸದ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಇಲಾಖೆ ಈ ಎರಡೂ ಶಾಲೆಗಳ ಬಗ್ಗೆ ವಿಶೇಷ ಗಮನಹರಿಸಿ ಅವುಗಳನ್ನು ಉಳಿಸಿ ಬೆಳೆಸುವಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.
ಕ್ರಮ ಕೈಗೊಳ್ಳುವ ಭರವಸೆ: “ಈ ಶಾಲೆಗಳ ಬಗ್ಗೆ ಶಿಕ್ಷಣ ಸಂಯೋಜಕರಿಂದ ವರದಿಗಳನ್ನು ತರಿಸಿ ಮೇಲಧಿಕಾರಿಗಳಿಗೆ ಮಾಹಿತಿಯನ್ನು ನೀಡಿ ಕ್ರಮ ಕೈಗೊಳ್ಳಲಾಗುವುದು” ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ ಹೇಳಿದ್ದಾರೆ.