ಶಾಸಕ ಭರತ್ ರೆಡ್ಡಿ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ಬೃಹತ್ ಪ್ರತಿಭಟನೆ
ಬಳ್ಳಾರಿ: ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಶಾಸಕ ಭರತ್ ರೆಡ್ಡಿಯನ್ನು ಕೂಡಲೇ ಬಂಧಿಸಬೇಕು ಹಾಗೂ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಸರ್ಕಾರಿ ನೌಕರರಿಗೆ ಯಾವುದೇ ರೀತಿಯ ರಕ್ಷಣೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಬಳ್ಳಾರಿ: ಸಿದ್ದರಾಮಯ್ಯ ಕಾಂಗ್ರೆಸ್‌ನ ಕೊನೆಯ ಸಿಎಂ – ಕಾರಜೋಳ
“ಇಂದು ಕರ್ನಾಟಕ ರಾಜ್ಯ ಗಾಂಜಾದಲ್ಲಿ ಮುಳುಗಿ ಹೋಗುತ್ತಿದೆ. ಬಳ್ಳಾರಿಯಲ್ಲಿ ಸರ್ವಾಧಿಕಾರ ಮಿತಿಮೀರಿದೆ. ಶಾಸಕ ಭರತ್ ರೆಡ್ಡಿ ಐದು ನಿಮಿಷದಲ್ಲಿ ಜನಾರ್ಧನ ರೆಡ್ಡಿಯ ಮನೆ ಸುಟ್ಟು ಹೋಗುತ್ತಿತ್ತು, ಹತ್ತು ನಿಮಿಷದಲ್ಲಿ ಇಡೀ ಬಳ್ಳಾರಿ ಸುಟ್ಟು ಹೋಗುತ್ತಿತ್ತು ಎಂದು ಹೇಳಿಕೆ ನೀಡಿದ್ದಾರೆ. ಇಂತಹ ಮಾತುಗಳನ್ನು ಬೇರೆ ಪಕ್ಷದವರು ಹೇಳಿದ್ದರೆ, ಇಷ್ಟೊತ್ತಿಗೆ ಅವರನ್ನು ಬಂಧಿಸಿ ಜೈಲಿಗೆ ಕಳಿಸುತ್ತಿದ್ದರು” ಎಂದು ರವಿಕುಮಾರ್ ಕಿಡಿಕಾರಿದರು.
ಇತ್ತೀಚೆಗೆ ಭದ್ರಾವತಿ ಶಾಸಕನ ಪುತ್ರ ಮರಳು ವಿಚಾರವಾಗಿ ಮಹಿಳಾ ಅಧಿಕಾರಿಗೆ ಅವಾಚ್ಯ ಪದಗಳಿಂದ ಬೈದ ಪ್ರಕರಣ, ರಾಜುಗೌಡಾ ಮಹಿಳಾ ಆಯುಕ್ತೆಗೆ ನಿಂದನೆ ಮಾಡಿದ ಘಟನೆಗಳನ್ನು ಉಲ್ಲೇಖಿಸಿದ ಅವರು, “ಆ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ. ಆದರೆ ಬಳ್ಳಾರಿಯಲ್ಲಿ ಶಾಸಕ ಭರತ್ ರೆಡ್ಡಿ ಮನೆ ಸುಡುತ್ತೇನೆ, ಬಳ್ಳಾರಿ ಸುಡುತ್ತೇನೆ ಎಂದು ಹೇಳಿದರೂ ಅವರ ವಿರುದ್ಧ ಏಕೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ?” ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಬಳ್ಳಾರಿ: ಬಿಜೆಪಿ ಬೃಹತ್ ಪ್ರತಿಭಟನಾ ಸಮಾವೇಶಕ್ಕೆ ಚಾಲನೆ
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಕುರಿತೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರವಿಕುಮಾರ್, “ಈ ಹಗರಣದಲ್ಲಿ ಸಿಕ್ಕಿರುವ ಶಾಸಕರನ್ನು ಕೂಡಲೇ ಬಂಧಿಸಬೇಕು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಈಗಾಗಲೇ ಸಿಬಿಐ ನೋಟಿಸ್ ನೀಡಿದೆ. ಇಂತಹ ಸಂದರ್ಭದಲ್ಲಿ ಶಾಸಕ ಭರತ್ ರೆಡ್ಡಿಯನ್ನು ಬಂಧಿಸಲು ಸರ್ಕಾರಕ್ಕೆ ಏನು ತೊಂದರೆ?” ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಹಣಕಾಸಿನ ವ್ಯವಸ್ಥೆಯೂ ಸಂಪೂರ್ಣವಾಗಿ ಹದಗೆಟ್ಟಿದ್ದು, ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ದಿನೇ ದಿನೇ ಬಹಿರಂಗವಾಗುತ್ತಿದೆ. “ರಾಜ್ಯದಲ್ಲಿ ವಿಪಕ್ಷ ಇರುವುದರಿಂದಲೇ ನಾವು ಜನರ ಪರವಾಗಿ ಹೋರಾಟ ಮಾಡುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರದ ದೌರ್ಜನ್ಯ ಮತ್ತು ದುರಾಡಳಿತದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ” ಎಂದು ಎನ್. ರವಿಕುಮಾರ್ ಸ್ಪಷ್ಟಪಡಿಸಿದರು.









