ತಾರಾತಿಗಾಡಿ: ರಷಿಯಾ ಪುಟ್ಯಾ ವಿಮಾನ ಇಳಿದ ಕೂಡಲೇ ಸೋದಿ ಮಾಮಾ ಮತ್ತು ಗೆಳೆಯರೆಲ್ಲ ಪುಟ್ಯಾನ ಸುತ್ತಲೂ ನಿಂತು…
ಬಂದರೋ ಬಂದರೋ ಪುಟ್ಯ ಬಂದರೋ…ಹಾಗೆ ಬಂದರೋ..ಏನರ ತಂದರೋ….
ಎಂದು ದೊಡ್ಡ ದನಿಯಲ್ಲಿ ಹಾಡುತ್ತ .. ಚಪ್ಪಾಳೆ ಹೊಡೆಯುತ್ತ ಆತನ ಸುತ್ತಲೂ ತಿರುಗ ತೊಡಗಿದರು. ಈ ಹಾಡಿಗೆ..ಇವರ ಡಾನ್ಸಿಗೆ ಕುಲು ಕುಲು ನಗುತ್ತಿದ್ದ ಪುಟ್ಯಾ… ವಾಟ್ ಎ ಡಾನ್ಸ್..ವಾಟ್ ಎ ಡಾನ್ಸ್ ಎಂದು ಎರಡೆರಡು ಬಾರಿ ಹೇಳಿದ.
ಹಾಡು ನಿಂತ ಮೇಲೆ ಸೋದಿ ಮಾಮಾ ಅವರನ್ನು ಬಾ ಪುಟ್ಯಾ ಬಾ…ಮಾರಿ ತೊಳಕೋ…ನಾಷ್ಟಾರೆಡಿ ಮಾಡಸ್ತೀನಿ ಅಂದರು. ಅದಕ್ಕೆ ಪುಟ್ಯಾ ನಾಷ್ಟಾ ಅಂದ ಕೂಡಲೇ ನಂಗೆ ಅಂಜಿಕಿ ಬರುತ್ತೆ…ಮೊನ್ನೆ ಅವರೆಡು ಹುಡ್ರು…ಒಬ್ಬೊಬ್ರ ಮನೆಯಲ್ಲಿ ನಾಷ್ಟಾ ಮಾಡಿದ್ದಕ್ಕ ಎಷ್ಟು ಸುದ್ದಿ ಆಗಿದಾರೆ ಅಂದ. ಹೇ…ಆ ನಾಷ್ಟಾ ಬ್ಯಾರೆ..
ನೀ ಬಾ ಸುಮ್ನ ಅಂದು ಮುಂಗೈ ಹಿಡಿದು ಒಳಗೆ ಕರೆದುಕೊಂಡು ಹೋದರು ಸೋದಿ ಮಾಮಾ. ಇಬ್ಬರೂ ಮಂಡಾಳೊಗ್ಗಣ್ಣಿ ಮಿರ್ಚಿ ತಿಂದರು..ಮಿರ್ಚಿ ಬಹಳ ಖಾರ ಅಂದ ಪುಟ್ಯಾನಿಗೆ ಬಿಸಿನೀರಿನಲ್ಲಿ ಸಕ್ಕರೆ ಕರಗಿಸಿಕೊಡಲಾಯಿತು…ಎಲ್ಲೂ ಬಂದ್ರು ಇನ್ನ ಮೀಟಿಂಗ್ ಮಾಡೋಣ ಎಂದು ಸೋದಿ ಮಾಮಾ..ನೋಡ್ ಪುಟ್ಯಾ…
ನಾನು ಅಂದರ ಏನು ಅಂತ ನಿನಗೆ ಗೊತ್ತಿದೆ…ನೀನು ಅಂದ್ರ ಏನು ಅಂತ ನಂಗೆ ತಿಳಿದಿದೆ….ಈಗ ವಿಷಯ ಏನೆಂದರೆ ನಾ ಏನ್ ಕೊಡ್ತೀನಿ ಅದನ್ನ ನೀನು ಒಲ್ಲೆ ಅನಲಾರದ ತಗೊಂಡು ಹೋಗಬೇಕು ಅಂದರು. ಅದಕ್ಕೆ ಪುಟ್ಯಾ ಹೇ ಮಾಮಾ ಎಲ್ಲೆಲ್ಲು ಗಿಫ್ಟ್ ಯಾಕೆ ಅಂದರು. ಇಲ್ಲಿಲ್ಲ..
ನಂಗೆ ಕೊಡಬೇಕು ಅಂತ ಅನಿಸಿದೆ ಅಂದದ್ದಕ್ಕೆ ಆಯಿತು ಬುಡಪಾ ನಿನ್ ಮನಸಿಗೆ ಯಾಕ ಬ್ಯಾಸರ ಮಾಡ್ಲಿ ಅಂತ ಪುಟ್ಯಾ ನಗುಮಾರಿ ಮಾಡಿದ. ಎಲ್ಲ ಮಾತುಕತೆ ಆಯಿತು…ಊಟಕ್ಕೆ ಪುಂಡಿಪಲೈ ಚಟ್ಟಿ…ಸಜ್ಜಿ ರೊಟ್ಟಿ ಮಾಡಿಸಲಾಗಿತ್ತು.
ಪುಟ್ಯಾನೂ ಜಬರ್ದಸ್ತ್ ತಿಂದ…ಸ್ವಲ್ಪ ಹೊತ್ತಾದ ಮೇಲೆ ಯಾಕೋ ಹೊಟ್ಟೆಯಲ್ಲಿ ಗುಡುಗುಡು ಅಂತ ಅಂದಾಗ ಸೋದಿ ಮಾಮಾ ಪುಟ್ಯಾನಿಗೆ ಚೂರ್ಣ ಕೊಟ್ಟರು…ಹೆಂಗರ ಆಗಲಿ ನಾ ಊರಿಗೆ ಹೋಗ್ತಿನಿ ಅಂತ ಪುಟ್ಯಾ ಹೊರಟು ನಿಂತಾಗ ಸೋದಿ ಮಾಮಾ…
ಇಬ್ಬರನ್ನು ಕೈ ಹಿಡಿದುಕೊಂಡು ಬಂದು…ಪುಟ್ಯಾ ಇಕಾ ತೊಗೋ.. ಇವೆರಡು ನಿನಗೆ ಗಿಫ್ಟ್. ಭಾಷೆ ಕೊಟ್ಟಿದ್ದಿಯ.. ಇವರನ್ನು ಇಲ್ಲೇ ಬಿಟ್ಟು ಹೋಗಬೇಡ… ಎಂದು ಹೇಳಿ ಆ ಇಬ್ಬರನ್ನು ಪುಟ್ಯಾಗೆ ಗಿಫ್ಟ್ ಕೊಟ್ಟು ಕಳಿಸಿದ.
